ADVERTISEMENT

ಭೂಮಿಯ ಅತ್ಯಂತ ಆಳ ತಲುಪಿ ಹೊರಬಂದ ಕ್ಯಾಮರಾನ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಹ್ಯೂಸ್ಟನ್ (ಪಿಟಿಐ): `ಟೈಟಾನಿಕ್~ ಮತ್ತು `ಅವತಾರ್~ ಚಿತ್ರದ ನಿರ್ದೇಶಕ  ಜೇಮ್ಸ ಕ್ಯಾಮರಾನ್ ಅವರು ಪಶ್ಚಿಮ ಪೆಸಿಫಿಕ್ ಸಮುದ್ರದಲ್ಲಿ ಭೂಮಿಯ ಅತ್ಯಂತ ಆಳದ ಸ್ಥಳಕ್ಕೆ ಪಯಣಿಸುವ ಮೂಲಕ ಗಮನ ಸೆಳೆದಿದ್ದಾರೆ.

ಈ ಹಿಂದೆ ಕೇವಲ ಇಬ್ಬರು ಮಾತ್ರ  ಈ ಸ್ಥಳವನ್ನು ತಲುಪಿದ್ದರು.  ವಿಶೇಷವಾಗಿ ತಯಾರಿಸಲಾದ ಒಬ್ಬ ವ್ಯಕ್ತಿ ಕುಳಿತುಕೊಳ್ಳುವ ಜಲಾಂತರ್ಗಾಮಿಯಲ್ಲಿ ಕುಳಿತು ಸೋಮವಾರ ಸಮುದ್ರದ 7 ಮೈಲು ಆಳಕ್ಕೆ ತಲುಪಿದರು ಎಂದು ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿ ಹೇಳಿದೆ.

ಕ್ಯಾಮರಾನ್ ಅವರು ಸಮುದ್ರದೊಳಗೆ 35,756 ಅಡಿ ಆಳ ತಲುಪಿ ಅಲ್ಲಿ ಕೆಲ ಕಾಲ ಶೋಧ ನಡೆಸಿ ಚಿತ್ರೀಕರಣವನ್ನೂ ನಡೆಸಿದರು. ಇದಕ್ಕೆ ಎರಡು ಗಂಟೆಗೂ ಹೆಚ್ಚಿನ ಅವಧಿ ತೆಗೆದುಕೊಂಡರು.

12 ಟನ್ ತೂಕದ `ಡೀಪ್ ಸೀ ಚಾಲೆಂಜರ್~ ಹೆಸರಿನ ಜಲಾಂತರ್ಗಾಮಿಯಲ್ಲಿ ಸಂಚರಿಸಿದ ಕ್ಯಾಮರಾನ್ ಜೀವವಿಜ್ಞಾನಿಗಳು ಮತ್ತು ಭೂಗರ್ಭಶಾಸ್ತ್ರಜ್ಞರ ಅಧ್ಯಯನದ ಅನುಕೂಲಕ್ಕಾಗಿ ಆಳದಲ್ಲಿನ ಕೆಲ ನಮೂನೆಗಳನ್ನು ತೆಗೆದುಕೊಂಡು ಬರಲು ಯೋಜಿಸಿದ್ದರು.

ಕ್ಯಾಮರಾನ್ ಅವರು ಸಮುದ್ರದ ಆಳ ತಲುಪಿರುವುದು ಇದು ಮೊದಲೇನಲ್ಲ. ಈ ಹಿಂದೆ 72 ಬಾರಿ `ಡೀಪ್ ಸೀ~ ಮುಳುಗು ಹಾಕಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.