ADVERTISEMENT

ಮಕ್ಕಳನ್ನು ನೆನೆದು ಕಣ್ಣೀರಿಟ್ಟ ಒಬಾಮ

​ಪ್ರಜಾವಾಣಿ ವಾರ್ತೆ
Published 6 ಜನವರಿ 2016, 19:53 IST
Last Updated 6 ಜನವರಿ 2016, 19:53 IST
ದಾಖಲೆ ಪತ್ರಗಳ ಪರಿಶೀಲನೆ ಬಳಿಕವೇ ಬಂದೂಕು
ದಾಖಲೆ ಪತ್ರಗಳ ಪರಿಶೀಲನೆ ಬಳಿಕವೇ ಬಂದೂಕು   

ವಾಷಿಂಗ್ಟನ್‌ (ಪಿಟಿಐ): ಅಮೆರಿಕದಲ್ಲಿ ಬಂದೂಕು ಹಿಂಸಾಚಾರಕ್ಕೆ ಬಲಿಯಾದ ಮಕ್ಕಳನ್ನು ನೆನಪಿಸಿಕೊಂಡು ಅಧ್ಯಕ್ಷ ಬರಾಕ್‌ ಒಬಾಮ ಅವರು ಭಾವೋದ್ವೇಗಕ್ಕೆ ಒಳಗಾದ ಪ್ರಸಂಗ ಶ್ವೇತಭವನದಲ್ಲಿ ಮಂಗಳವಾರ ನಡೆಯಿತು.

ಮೂರು ವರ್ಷಗಳ ಹಿಂದೆ ಕನೆಕ್ಟಿಕಟ್‌ನ ನ್ಯೂಟೌನ್‌ನ ಪ್ರಾಥಮಿಕ ಶಾಲೆಯೊಂದರಲ್ಲಿ 20 ಮಕ್ಕಳನ್ನು ಬಲಿಪಡೆದ ಬಂದೂಕು ಹಿಂಸಾಚಾರದ ಸ್ಮರಣಾರ್ಥ ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಒಬಾಮ ಅವರಿಗೆ ದುಃಖ ನಿಯಂತ್ರಿಸಲಾಗದೆ ಬಹಿರಂಗವಾಗಿ ಅತ್ತರು.

‘ಬಂದೂಕು ಹಿಂಸಾಚಾರದ ಬಗ್ಗೆ ಪ್ರತಿ ಬಾರಿ ಮಾತನಾಡುವಾಗಲೂ ಆ ಮಕ್ಕಳು ನೆನಪಾಗಿ ನನಗೆ ಹುಚ್ಚು ಹಿಡಿದಂತಾಗುತ್ತದೆ’ ಎಂದು ಒಬಾಮ ಗದ್ಗದಿತರಾದರು. ಕಣ್ಣೀರು ಅನಿಯಂತ್ರಿತವಾಗಿ ಹರಿಯಿತು. ಇದೇ ವೇಳೆ ಅವರು ಬಂದೂಕು ಹಿಂಸಾಚಾರ ನಿಯಂತ್ರಣ ಮತ್ತು ಅನಿಯಂತ್ರಿಕ ಬಂದೂಕು ಮಾರಾಟಕ್ಕೆ ಕಡಿವಾಣ ಹಾಕಲು ತಮ್ಮ ಸರ್ಕಾರ ಜಾರಿಗೆ ತಂದಿರುವ ಕಾನೂನು ಕ್ರಮಗಳ ಬಗ್ಗೆ  ಮಾತನಾಡಿದರು.

ರಿಪಬ್ಲಿಕನ್‌ ಪಕ್ಷದ ವಿರೋಧದ ನಡುವೆಯೂ ಇಂತಹ ಕಾನೂನು ಜಾರಿಅನುಷ್ಠಾನಗೊಳ್ಳಬೇಕಾದ ಅಗತ್ಯವನ್ನು ವಿವರಿಸಿದ ಅವರು, ‘ಬಂದೂಕು ಲಾಬಿ ರಿಪಬ್ಲಿಕನ್ನರ ಮೇಲೆ ಪ್ರಭಾವ ಹೊಂದಿರಬಹುದು. ಆದರೆ, ಅಮೆರಿಕವನ್ನು ನಿಯಂತ್ರಿಸಲು ಅದಕ್ಕೆ ಸಾಧ್ಯವಿಲ್ಲ’ ಎಂದರು.

‘ನಮ್ಮ ಪ್ರಜೆಗಳಿಗೆ ಬಂದೂಕು ಹೊಂದುವ ಹಕ್ಕನ್ನು ಕಾಯ್ದುಕೊಳ್ಳುವ ಜತೆಗೆ ಇತರರ ಭಾವನೆಗಳನ್ನೂ ಗೌರವಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಮುಖ್ಯ. ಈ ಎರಡನ್ನೂ ಸಮದೂಗಿಸಿಕೊಂಡು ಹೋಗುವುದು ಅವಶ್ಯ’ ಎಂದು  ಪ್ರತಿಪಾದಿಸಿದರು.

‘ಬಂದೂಕುಧಾರಿಗಳ ಹಾವಳಿಯಿಂದಾಗಿ ಸೌತ್‌ ಕರೋಲಾದ ಚಾರ್ಲ್‌ಸ್ಟನ್‌ನಲ್ಲಿ ಕ್ರಿಶ್ಚಿಯನ್ನರಿಗೆ,  ಕಾನ್ಸಾಸ್‌ ಸಿಟಿಯಲ್ಲಿ ಯೆಹೂದಿಗಳಿಗೆ, ಓಕ್‌ ಕ್ರೀಕ್‌ನಲ್ಲಿ ಸಿಖ್ಖರಿಗೆ, ಚಾಪೆಲ್‌ ಹಿಲ್‌ನಲ್ಲಿ ಮುಸಲ್ಮಾನರಿಗೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ  ಪ್ರಾರ್ಥಿಸುವ ಅವಕಾಶವೇ ಇಲ್ಲದಂತಾಗಿದೆ’ ಎಂದು ಒಬಾಮ ವಿಷಾದಿಸಿದರು.

‘ಶಾಂತಿಯುತವಾಗಿ ಪ್ರಾರ್ಥನಾ ಸಭೆಗಳನ್ನು ನಡೆಸುವುದು ನಮ್ಮ ಹಕ್ಕು.  ಹಾಗೆಯೇ ಬ್ಲಾಕ್ಸ್‌ಬರ್ಗ್‌, ಸಾಂಟಾ ಬಾರ್ಬರಾ ಮತ್ತು ಕೊಲಂಬಿನ್‌ಗಳಲ್ಲಿ ಶಾಲಾ ಮಕ್ಕಳ ಬಲಿ ತೆಗೆದುಕೊಂಡು ಅವರ  ಬದುಕುವ ಹಕ್ಕನ್ನೇ ಕಸಿದುಕೊಂಡಿದ್ದೇವೆ. ನ್ಯೂಟೌನ್‌ನಲ್ಲಿ ಅವರಿಗಿಂತಲೂ ಪುಟ್ಟ ಮಕ್ಕಳ ಬದುಕನ್ನು ಕಿತ್ತುಕೊಂಡಿದ್ದೇವೆ’ ಎಂದು ಒಬಾಮ ಆತಂಕ ವ್ಯಕ್ತಪಡಿಸಿದರು.

‘ಪುಟ್ಟ ಮಕ್ಕಳ ಜೀವವನ್ನು ಬಂದೂಕಿನ ಮೂಲಕ ಕಿತ್ತುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಾರರು. ಆ ಮಕ್ಕಳ ಬಗ್ಗೆ ಯೋಚಿಸಿದಾಗಲೆಲ್ಲ ಹುಚ್ಚು ಹಿಡಿದಂತಾಗುತ್ತದೆ. ಷಿಕಾಗೊದ ರಸ್ತೆಯಲ್ಲಿ ಹಾದುಹೋಗುವಾಗಲೆಲ್ಲ ಅಂತಹ ಭಾವನೆ ಕಾಡುತ್ತದೆ’ ಎಂದು ಹೇಳುತ್ತಾ ಉಕ್ಕಿ ಬಂದ ದುಃಖವನ್ನು ನಿಯಂತ್ರಿಸಲಾಗದೇ ಅರೆಕ್ಷಣ ಮೌನಕ್ಕೆ ಶರಣಾದರು.
ರಿಪಬ್ಲಿಕನ್ನರಿಂದ ವಾಗ್ದಾಳಿ: ನೂತನ ಬಂದೂಕು  ನಿಯಂತ್ರಣ ಕ್ರಮಗಳು ಕಾನೂನುವಿರೋಧಿ ಎಂದು ಒಬಾಮ ಅವರ ರಾಜಕೀಯ ಎದುರಾಳಿಯಾದ ರಿಪಬ್ಲಿಕನ್‌ ಪಕ್ಷ  ವಾಗ್ದಾಳಿ ನಡೆಸಿದೆ.

ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ತಾವು ಗೆದ್ದುಬಂದಲ್ಲಿ ಅಮೆರಿಕನ್ನರ ಸಂವಿಧಾನಬದ್ಧ ಹಕ್ಕುಗಳನ್ನು ಕಸಿಯುವ ಈ ನೂತನ ಕ್ರಮಗಳನ್ನು ರದ್ದುಪಡಿಸುವುದಾಗಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಾದ ಜೇಬ್‌ ಬುಷ್‌ ಮತ್ತು ಮಾರ್ಕೊ ರುಬಿಯೊ ಅವರು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾನೂನಿನ ಮುಖ್ಯಾಂಶ
*ಅಮೆರಿಕದಲ್ಲಿ ಬಂದೂಕು  ಮಾರಾಟ ಮಾಡಲು ಪರವಾನಗಿ  ಕಡ್ಡಾಯ
* ಅವರು ಮತ್ತೆ ಮಾರಾಟ ಮಾಡುವ ವೇಳೆ ಗ್ರಾಹಕರ ಪೂರ್ವಾಪರ ಮಾಹಿತಿ ಸಂಗ್ರಹ ಕಡ್ಡಾಯ
* ಮಾಹಿತಿ ಸಂಗ್ರಹಿಸದಿದ್ದಲ್ಲಿ ಅಪರಾಧ ಮೊಕದ್ದಮೆ ತಪ್ಪಿದ್ದಲ್ಲ
*ಪೂರ್ವಾಪರ ಮಾಹಿತಿ ಕಲೆಹಾಕಲು ಹೆಚ್ಚಿನ ಸಿಬ್ಬಂದಿ ನೇಮಕ
* ಸರ್ಮಪಕ ಮತ್ತು ಪರಿಣಾಮಕಾರಿಯಾಗಿ ಕಾನೂನು ಜಾರಿಗೆ 200 ಹೆಚ್ಚುವರಿ ದಳಗಳು ಮತ್ತು ತನಿಖಾಧಿಕಾರಿಗಳ ನಿಯೋಜನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT