ADVERTISEMENT

ಮಕ್ಕಳಿಗೆ ಹೊಡೆಯುವ ಮುನ್ನ ಯೋಚಿಸಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಟೊರಾಂಟೊ (ಪಿಟಿಐ):  `ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?~ ಎಂಬ ಗಾದೆ ಮಾತಿನಂತೆ ಚಿಕ್ಕವರಿದ್ದಾಗಲೇ ಮಕ್ಕಳಿಗೆ ಹೊಡೆದು ಬುದ್ಧಿ ಕಲಿಸಬೇಕು ಎನ್ನುವ ಹೆತ್ತವರು ಮಕ್ಕಳಿಗೆ ಆಗಾಗ ಹೊಡೆಯುವುದು ಸಾಮಾನ್ಯ.

ಆದರೆ ಚಿಕ್ಕಂದಿನಲ್ಲಿ ಹೊಡೆತ ತಿಂದರೆ ಮುಂದೆ ಬೆಳೆದು ದೊಡ್ಡವರಾದಾಗ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ ಎಂದು ಕೆನಡಾದ ಸಂಶೋಧನೆಯೊಂದು ಎಚ್ಚರಿಸಿದೆ.

ಮಕ್ಕಳಿಗೆ, ಅದರಲ್ಲೂ ಅವರ ಪೃಷ್ಠದ ಮೇಲೆ ಹೊಡೆದರೆ ಮುಂದೆ ಅವರು ಮಾನಸಿಕ ಆಘಾತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಹೆತ್ತವರ ಹೊಡೆತ ಸಹಿಸುವ ಮಕ್ಕಳಲ್ಲಿ ಶೇ 2ರಿಂದ 7ರಷ್ಟು ಮಕ್ಕಳು ವರ್ಷ ಕಳೆದಂತೆ ವಿವಿಧ ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ ಎಂಬ ಸಂಶೋಧನಾ ಅಧ್ಯಯನವನ್ನು ಅಮೆರಿಕದ ನಿಯತಕಾಲಿಕ ಪ್ರಕಟಿಸಿದೆ.

`ಮಕ್ಕಳಿಗೆ ದೈಹಿಕ ಶಿಕ್ಷೆಯನ್ನು ಕೊಡಬಾರದು ಎಂಬ ಸಂದೇಶವನ್ನು ಈ ಅಧ್ಯಯನ ತಿಳಿಸುತ್ತದೆ. ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ರೂಪಿಸುವ ವೇಳೆ ಇವುಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ಅಪಾಯದಿಂದ ಅವರನ್ನು ರಕ್ಷಿಸುವುದು ಅಗತ್ಯವಿದೆ~ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಮನಿಟೋಬಾ ವಿಶ್ವವಿದ್ಯಾಲಯದ ಸಮುದಾಯ ಆರೋಗ್ಯ ವಿಜ್ಞಾನ ವಿಭಾಗದ  ಟ್ರೇಸಿ ಅಫಿಫಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.