
ವಾಷಿಂಗ್ಟನ್ (ಐಎಎನ್‌ಎಸ್): ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದ ಬೇಅಂತ್ ಸಿಂಗ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಗ್ತಾರ್ ಸಿಂಗ್ ಹವಾರನ ಬಿಡುಗಡೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ಅಮೆರಿಕ ನಿರಾಕರಿಸಿದೆ.
ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ನೀಡುವುದನ್ನು ಅಮೆರಿಕ ಉತ್ತೇಜಿಸುತ್ತದೆ ಮತ್ತು ಸರ್ಕಾರಗಳ ನಡುವೆ ಸಹಕಾರಕ್ಕೆ ಎಂದಿನಂತೆ ಬದ್ಧವಾಗಿದೆ ಎಂದು ಸರ್ಕಾರದ ಪರವಾಗಿ ಹೇಳಿಕೆ ನೀಡಿರುವ ‘ವೀ ದ ಪೀಪಲ್’ನ ಸ್ಪಷ್ಟಪಡಿಸಿದೆ.
ಲಕ್ಷಾಂತರ ಸಹಿ ಸಂಗ್ರಹ: ಭಾರತದಲ್ಲಿ ಜೈಲು ಶಿಕ್ಷೆ ಆನುಭವಿಸುತ್ತಿರುವ ಹವಾರನನ್ನು ಬಿಡುಗಡೆ ಮಾಡುವ ಸಂಬಂಧ ಅಧ್ಯಕ್ಷರು ಭಾರತದ ಮೇಲೆ ಒತ್ತಡ ಹೇರಬೇಕು ಎಂದು ಕೋರಿ ನ್ಯೂಯಾರ್ಕ್‌ನ ‘ಸಿಖ್ ಫಾರ್ ಜಸ್ಟಿಸ್’ (ಎಸ್ಎಫ್‌ಜೆ) ಕಳೆದ ನವೆಂಬರ್‌ನಲ್ಲಿ ಆರಂಭಿಸಿದ್ದ ಅಭಿಯಾನದಲ್ಲಿ ಈಗ 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹವಾಗಿದೆ.
ಪ್ರಕರಣವೊಂದರಲ್ಲಿ ಅಧ್ಯಕ್ಷರ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಸರ್ಕಾರದ ‘ವೀ ದ ಪೀಪಲ್’ ವೆಬ್‌ಸೈಟ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಸಹಿ ಸಂಗ್ರಹವಾದರೆ ಅವರು ಪ್ರತಿಕ್ರಿಯೆ ನೀಡಲೇಬೇಕು ಎಂದು ಅಮೆರಿಕದ ಕಾನೂನು ಹೇಳುತ್ತದೆ.
ಆದರೆ ‘ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾನೂನು 1998ರ ಅನ್ವಯ ನಾವು ಮಧ್ಯಪ್ರವೇಶಿಸಲು ಅವಕಾಶವಿಲ್ಲ. ಅಲ್ಲದೆ ಈ ಪ್ರಕರಣ ವಿದೇಶವೊಂದರ ಕಾನೂನಿನ ವ್ಯಾಪ್ತಿಗೆ ಬರುವ ಕಾರಣ ಪ್ರತಿಕ್ರಿಯೆ ನೀಡಲಾಗದು’ ಎಂದು ಶ್ವೇತಭವನದ ಪ್ರಕಟಣೆ ಸ್ಪಷ್ಟಪಡಿಸಿದೆ.
‘ನಮ್ಮ ದೇಶವು ಧಾರ್ಮಿಕ ಸ್ವಾತಂತ್ರ್ಯವನ್ನು ಅಪಾರವಾಗಿ ಗೌರವಿಸುತ್ತದೆ ಮತ್ತು ಯಾವುದೇ ದೇಶದ ಬಹುತ್ವ ಸಂಸ್ಕೃತಿಯನ್ನು ನಮ್ಮ ತೀರದಲ್ಲಿ ತಡೆಹಿಡಿಯಬಾರದು’ ಎಂದು ಅಧ್ಯಕ್ಷರ ಸಂದೇಶದಲ್ಲಿ ಹೇಳಲಾಗಿದೆ.
ಎಸ್‌ಎಫ್‌ಜೆ ವಾದ: ‘ಹವಾರನನ್ನು ಶ್ರೀ ಅಕಾಲ್ ತಖ್ತ್ ಸಂಘಟನೆಯ ಮುಖ್ಯಸ್ಥನೆಂದು ತೀವ್ರವಾದಿ ಸಿಖ್ಖರು ಬಿಂಬಿಸಿದ್ದರು. 1995ರಲ್ಲಿ ನಡೆದ ಬೇಅಂತ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಆದರೆ ಮುಖ್ಯಮಂತ್ರಿಗಳು ಒಂದು ಲಕ್ಷಕ್ಕೂ ಅಧಿಕ ಸಿಖ್ಖರ ಹತ್ಯಾಕಾಂಡಕ್ಕೆ ಕಾರಣರಾಗಿದ್ದರು. ಖಾಲಿಸ್ತಾನ ಪರ ಹೋರಾಟಗಾರನಾಗಿರುವ ಹವಾರನನ್ನು ಜೈಲಿನಲ್ಲೇ ಮುಗಿಸಿಬಿಡುವ ಅಪಾಯವಿದೆ. ಹಾಗಾಗಿ ಒಬಾಮ ಮಧ್ಯಪ್ರವೇಶಿಸಿ ಹವಾರನ ಬಿಡುಗಡೆಗೆ ಭಾರತದ ಮೇಲೆ ಒತ್ತಡ ಹೇರಬೇಕು’ ಎಂದು ಮನವಿಯಲ್ಲಿ ಎಸ್‌ಎಫ್‌ಜೆ ಆಗ್ರಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.