ADVERTISEMENT

ಮನುಕುಲದ ವಿಕಾಸ: ನಿಗೂಢತೆ ಹೆಚ್ಚಿಸಿದ ಹೊಸ ಸಂಶೋಧನೆ

ಸುದ್ದಿ ವಿವರಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2015, 19:34 IST
Last Updated 13 ಸೆಪ್ಟೆಂಬರ್ 2015, 19:34 IST

‘ಮನುಕುಲದ ತೊಟ್ಟಿಲು’ ಎಂದೇ ಹೆಸರಾದ ದಕ್ಷಿಣ ಆಫ್ರಿಕಾದ ಗುಹೆಯೊಂದರಲ್ಲಿ ಪತ್ತೆಯಾಗಿರುವ ಹೊಸ ಪ್ರಭೇದದ ಜೀವಿಯು, ಮನು ಕುಲದ ವಿಕಾಸದ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮಾನವನ ಪೂರ್ವಿಕರ ಬಗ್ಗೆ ಹಲವಾರು ಪಳೆಯುಳಿಕೆಗಳು ಈ ಸ್ಥಳದಲ್ಲಿಯೇ ಪತ್ತೆಯಾಗಿರುವುದರಿಂದ ಇದಕ್ಕೆ ‘ಮನುಕುಲದ ತೊಟ್ಟಿಲು’ ಎಂದೇ ಹೆಸರಿಡಲಾಗಿದೆ.

ಈ ಜೀವಿ ತುಂಬ ಪ್ರಾಚೀನ ಎಂದೂ ನಂಬಲಾಗಿದೆ. ಕಿತ್ತಳೆ ಹಣ್ಣಿನ ಗಾತ್ರದ ಪುಟ್ಟ ಮಿದುಳು ಮತ್ತು ದೊಡ್ಡ ಕೋತಿಗೆ ಇರುವಂತಹ ಭುಜ, ವಿಶಾಲ ಎದೆ, ನೆಟ್ಟಗೆ ನಡೆಯಲು ನೆರವಾಗುತ್ತಿದ್ದ ಕಾಲುಗಳು,    ಮರಗಳನ್ನು ಸುಲಭವಾಗಿ ಹತ್ತಲು ನೆರವಾಗುತ್ತಿದ್ದ ಬಲಿಷ್ಠ ಕೈಗಳು, ಮುಖದಲ್ಲಿ ನಗು  ಕಂಡುಬರುವ ಲಕ್ಷಣಗಳನ್ನು ಹೊಂದಿರುವುದರಿಂದ ಈ ಜೀವಿಯು ಆಧುನಿಕ ಮಾನವನ ಗುಣಲಕ್ಷಣಗಳಿಗೆ   ಹೆಚ್ಚಾಗಿ ಹೋಲುತ್ತದೆ.

ಗುಹೆಯಲ್ಲಿ ದೊರೆತಿರುವ ಮೂಳೆಗಳು, ಅರ್ಧ ಶತಮಾನದ ಅವಧಿಯಲ್ಲಿ ಪತ್ತೆಯಾಗಿರುವ ವಿಶಿಷ್ಟ ಪಳಿಯುಳಿಕೆಗಳಾಗಿವೆ.   ಮನುಕುಲದ ವಿಕಾಸದ ನಿಗೂಢತೆ ಭೇದಿಸಲು ಇವು ನೆರವಾಗಲಿವೆ.

ಹಸುಳೆ, ಮಕ್ಕಳು,  ವಯಸ್ಕರು ಮತ್ತು ಹಿರಿಯರಿಗೆ ಸೇರಿದ 1,550  ಮೂಳೆಯ ತುಣುಕುಗಳು ಒಂದೆಡೆಯೆ ದೊರೆತಿರುವುದೂ ಅಚ್ಚರಿ ಮೂಡಿಸಿದೆ.

ಗುಹೆಯ ಪ್ರವೇಶದ್ವಾರದಿಂದ 90 ಮೀಟರ್‌ ದೂರದಲ್ಲಿನ  ಕಡಿದಾದ ಇಳಿಜಾರಿನ ಮೂಲಕ ಮಾತ್ರ ತಲುಪಬಹುದಾದ ಇಕ್ಕಟ್ಟಾದ ಸ್ಥಳದಲ್ಲಿ ಈ ಮೂಳೆಗಳು ದೊರೆತಿರುವುದೂ ನಿಗೂಢವಾಗಿದೆ. ಮೇಲ್ಭಾಗದಿಂದ ಅಲ್ಲಿಗೆ ದೇಹಗಳನ್ನು ಬೀಸಾಕಿರಬಹುದೆಂದು ನಂಬಲಾಗಿದೆ.

ಈ ಹೊಸ ಜೀವಿಗೆ ಹೋಮೊ ನಲೆಡಿ (Homo naledi)  ಎಂದು ಹೆಸರಿಸಲಾಗಿದ್ದು, ಇವುಗಳು ಪತ್ತೆಯಾಗಿರುವ ಗುಹೆಯ ಸ್ಮರಣಾರ್ಥ ಈ ನಾಮಕರಣ ಮಾಡಲಾಗಿದೆ. ನಲೆಡಿ ಎಂದರೆ ದಕ್ಷಿಣ ಆಫ್ರಿಕಾದ ಸ್ಥಳೀಯ ಭಾಷೆಯಲ್ಲಿ ನಕ್ಷತ್ರ ಎಂದರ್ಥ. ಜೋಹಾನ್ಸ್‌ಬರ್ಗ್ ಬಳಿಯ ವಿಶ್ವ ಪರಂಪರೆ ತಾಣದಲ್ಲಿನ ರೈಸಿಂಗ್ ಸ್ಟಾರ್‌ ಹೆಸರಿನ (Rising Star) ಗುಹೆಯಲ್ಲಿ ಈ ಜೀವಿಯ ಪಳಿಯುಳಿಕೆಗಳು ಪತ್ತೆಯಾಗಿವೆ.

ನಿಗೂಢತೆ: ಈಗ ಪತ್ತೆಯಾಗಿರುವ ಮೂಳೆಗಳು ಎಷ್ಟು ಹಳೆಯವು, ಈ ಗುಹೆಯ  ಆಳದಲ್ಲಿ ಒಂದೆಡೆಯೇ ಇವೆಲ್ಲ ಪತ್ತೆಯಾಗಲು  ಏನು ಕಾರಣ, ಈ ಜೀವಿ ಆದಿ ಮಾನವನ ಪೂರ್ವಜ ಆಗಿರಬಹುದೇ, ಈ ಜೀವಿ ನಿಖರವಾಗಿ ಯಾವ ಕಾಲಘಟ್ಟದಲ್ಲಿ ಮತ್ತು ಯಾವ ಸ್ಥಳದಲ್ಲಿ ಜೀವಿಸಿತ್ತು, ಮನುಕುಲದ ವಿಕಾಸದಲ್ಲಿ ಇದರ ಸ್ಥಾನಮಾನವೇನು  ಮತ್ತಿತರ ನಿಗೂಢ ಪ್ರಶ್ನೆಗಳಿಗೆ  ಸಂಶೋಧಕರು ಇನ್ನೂ ಉತ್ತರ ಕಂಡುಕೊಳ್ಳಬೇಕಾಗಿದೆ.

ಈ ಮೊದಲು ಚಿಂಪಾಂಜಿಗಳೇ ಮಾನವನ ನಿಕಟ ಪ್ರಭೇದಗಳು ಎಂದು  ನಂಬಲಾಗಿತ್ತು. ಆದರೆ ‘ಹೋಮೊ ನಲೆಡಿ’ಯು ಚಿಂಪಾಂಜಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಾನವನಿಗೆ ಹತ್ತಿರವಾದ ಹೋಲಿಕೆ ಹೊಂದಿದೆ ಎಂದು ನಂಬಲಾಗಿದೆ. ಇದರ ಪಾದ ಮತ್ತು ಕೈಗಳು ಮಾನವನ ಕೈಕಾಲುಗಳಂತೆಯೇ ಇವೆ.

ಈ ಜೀವಿ 25ರಿಂದ 28 ಲಕ್ಷಗಳ ಹಿಂದೆ ಅಸ್ತಿತ್ವದಲ್ಲಿ ಇತ್ತು ಎಂದು ನಂಬಲಾಗಿದ್ದರೂ, ಅದನ್ನು ಖಚಿತಪಡಿ ಸಲು ಸಾಧ್ಯವಾಗಿಲ್ಲ.  25 ರಿಂದ 28 ಲಕ್ಷ ವರ್ಷಗಳ ಹಿಂದೆ ಈ ಜೀವಿ ಭೂಮಿಯ ಮೇಲೆ ನೆಲೆಸಿತ್ತು ಎಂದು ನಂಬಲಾಗಿದೆ.
‘ಹೋಮೊ ನಲೆಡಿ’ಯು ಆಧುನಿಕ ಮಾನವನ ಪೂರ್ವಜ ಎಂದೇನೂ ಸಂಶೋಧಕರು  ನಿರ್ಧಾರಕ್ಕೆ ಬಂದಿಲ್ಲ.

ವಿವರ
ಎತ್ತರ 5 ಅಡಿ
ತೂಕ –45 ಕೆಜಿ
ಮಿದುಳು – ಚಿಂಪಾಂಜಿಯ ಮಿದುಳಿನಷ್ಟು ಪುಟ್ಟ ಗಾತ್ರ
ತಲೆಬುರುಡೆ ಮತ್ತು ಹಲ್ಲು ಮಾನವರ ಪೂರ್ವಿಕರಂತೆಯೇ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.