ADVERTISEMENT

ಮಲಾಲ ಮೇಲಿನ ದಾಳಿ: ತಾಲಿಬಾನ್ ಧುರೀಣನ ಸಹೋದರರ ಸೆರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 11:10 IST
Last Updated 14 ಅಕ್ಟೋಬರ್ 2012, 11:10 IST
ಮಲಾಲ ಮೇಲಿನ ದಾಳಿ: ತಾಲಿಬಾನ್ ಧುರೀಣನ ಸಹೋದರರ ಸೆರೆ
ಮಲಾಲ ಮೇಲಿನ ದಾಳಿ: ತಾಲಿಬಾನ್ ಧುರೀಣನ ಸಹೋದರರ ಸೆರೆ   

ಇಸ್ಲಾಮಾಬಾದ್ (ಪಿಟಿಐ): ಹದಿಹರೆಯದವರ ಹಕ್ಕುಗಳ ಕಾರ್ಯಕರ್ತೆ ಪಾಕ್ ಬಾಲಕಿ ಮಲಾಲ ಯೂಸುಫ್ ರಝೈ ಮೇಲೆ ನಡೆಸಿದ ಮಾರಣಾಂತಿಕ ದಾಳಿಯಲ್ಲಿ ಷಾಮೀಲಾಗಿರುವ ಆಪಾದನೆಯಲ್ಲಿ ಪಾಕಿಸ್ತಾನಿ ಭದ್ರತಾ ಸಂಸ್ಥೆಗಳು ಸ್ವಾತ್ ಕಣಿವೆಯ ಹಿರಿಯ ತಾಲಿಬಾನ್ ಕಮಾಂಡರ್ ಒಬ್ಬನ ಮೂವರು ಸಹೋದರರನ್ನು ಬಂಧಿಸಿವೆ.

ಈ ಮಧ್ಯೆ ಆಸ್ಪತ್ರೆಯಲ್ಲಿ ಇನ್ನೂ ಗಂಭೀರ ಸ್ಥಿತಿಯಲ್ಲೇ ಇರುವ ಮಲಾಲ ನಿಧಾನವಾಗಿ ಚೇತರಿಸುತ್ತಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಂಕಿತರನ್ನು ಶನಿವಾರ ನೌಶೇರಾ ಜಿಲ್ಲೆಯ ಖೈಬರ್-ಪಖ್ತೂಖ್ವಾ ಪ್ರಾಂತದಲ್ಲಿ ಬಂಧಿಸಲಾಗಿದ್ದು ಪ್ರಶ್ನಿಸುವ ಸಲುವಾಗಿ ಅಜ್ಞಾತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಬಂಧಿತರ ಇನ್ನೊಬ್ಬ ಸಹೋದರ 2009ರ ಆದಿಯಲ್ಲಿ ಸೇನೆ ಕಾರ್ಯಾಚರಣೆ ನಡೆಸುವವರೆಗೂ ಸ್ವಾತ್ ಕಣಿವೆಯಲ್ಲಿ ನಿಯಂತ್ರಣ ಹೊಂದಿದ್ದ ಮೌಲಾನಾ ಫಝ್ಲುಲ್ಲಾ ನೇತೃತ್ವದ ತಾಲಿಬಾನ್ ಬಣದ ಹಿರಿಯ ಕಮಾಂಡರ್ ಆಗಿದ್ದ ಎಂದು ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮಲಾಲ ಮತ್ತು ಆಕೆಯ ಇಬ್ಬರು ಸಹಪಾಠಿಗಳ ಮೇಲೆ ಮಂಗಳವಾರ ನಡೆದ ಹಲ್ಲೆಯ ಸೂತ್ರಧಾರಿ ಎನ್ನಲಾಗಿರುವ ಅತಾವುಲ್ಲಾನನ್ನು ಶೀಘ್ರವೇ ಬಂಧಿಸುವ ಬಗ್ಗೆ ಪೊಲೀಸರಿಗೆ ವಿಶ್ವಾಸವಿದೆ ಎಂದು  ಸ್ವಾತ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಗುಲ್ ಅಫ್ಜಲ್ ಖಾನ್ ಅಫ್ರಿದಿ ಹೇಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.