ADVERTISEMENT

ಮಾಲ್‌ ದಾಳಿ: ಸತ್ತವರಲ್ಲಿ ಇಬ್ಬರು ಭಾರತೀಯರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ನೈರೋಬಿ (ಎಎಫ್‌ಪಿ): ಕೀನ್ಯಾದ ರಾಜಧಾನಿ ನೈರೋಬಿಯ ವೆಸ್ಟ್ ಗೇಟ್‌ ಶಾಪಿಂಗ್‌ ಮಾಲ್‌ ಒಳಗೆ ಸೋಮಾಲಿ ಉಗ್ರರು ಮನಬಂದಂತೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 59 ಮಂದಿ ಸತ್ತಿದ್ದು, ಇವರಲ್ಲಿ  ಭಾರತದ ಇಬ್ಬರು ಪ್ರಜೆಗಳು ಕೂಡ ಸೇರಿದ್ದಾರೆ.

ಸತ್ತವರ ಸಂಖ್ಯೆ 59ಕ್ಕೆ ಏರಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಈ ಪೈಕಿ ಭಾರತದ ನಾಲ್ವರು ಸೇರಿದ್ದಾರೆ. ಉಗ್ರರನ್ನು ಸದೆಬಡಿಯಲು ಕೀನ್ಯಾ ಪಡೆ ಇಸ್ರೇಲ್‌ ಕಮಾಂಡೊಗಳ ನೆರವು ಪಡೆದಿದೆ.  ಅಲ್‌ ಖೈದಾ ನಂಟು ಹೊಂದಿರುವ ಅಲ್ ಶಬಾಬ್‌ ಉಗ್ರರ ತಂಡ ನಡೆಸಿದ ಈ ಪೈಶಾಚಿಕ ದಾಳಿಯಲ್ಲಿ ದಕ್ಷಿಣ ಕೊರಿಯಾ, ಫ್ರಾನ್ಸ್‌, ಕೆನಡಾದ ತಲಾ ಇಬ್ಬರು ಹಾಗೂ ಚೀನಾದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮಾಲ್‌ನಲ್ಲಿ ಒತ್ತೆಯಲ್ಲಿರುವ ಸುಮಾರು 30 ಜನರನ್ನು ರಕ್ಷಿಸಲು ಕೀನ್ಯಾ ಪಡೆ ಹೋರಾಟ ನಡೆಸಿದೆ. ಈ ಮಾಲ್‌್ ಇಸ್ರೇಲಿಯೊಬ್ಬರ   ಒಡೆತನದಲ್ಲಿದೆ ಎನ್ನಲಾಗಿದೆ.

‘ಇಂಥ ಹೇಯ ಕೃತ್ಯ ನಡೆಸಿದವರನ್ನು ಸುಮ್ಮನೆ ಬಿಡಬಾರದು, ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಕೀನ್ಯಾ ಅಧ್ಯಕ್ಷ  ಉರು ಕೆನ್ಯಟ್ಟಾ ಪ್ರತಿಕ್ರಿಯಿಸಿದ್ದಾರೆ.

ಮಾಲ್‌ನಲ್ಲಿ ಏನಿಲ್ಲವೆಂದರೂ ಸಾವಿರ ಅಂಗಡಿಗಳು ಇವೆ.  ಮಾಲ್‌್ ಸುತ್ತ ಮುತ್ತ ಭಾರಿ ಪ್ರಮಾಣದಲ್ಲಿ ಸೇನಾ ಸಿಬ್ಬಂದಿ ಸುತ್ತುವರಿದ್ದಾರೆ. ಮಾಲ್‌ನಿಂದ ಸುಮಾರು ಸಾವಿರ ಮಂದಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ.

ನೈರೋಬಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಅಲ್‌್ ಖೈದಾ, 1998ರಲ್ಲಿ ಪೈಶಾಚಿಕ ದಾಳಿ ನಡೆಸಿತ್ತು. ಆಗ ಸುಮಾರು 200ಕ್ಕೂ ಹೆಚ್ಚು ಮಂದಿ ಸತ್ತಿದ್ದರು. ಈ ಘಟನೆಯ ಬಳಿಕ ನಡೆದ ಅತಿ ದೊಡ್ಡ ದಾಳಿ ಇದೀಗ ವೆಸ್ಟ್‌ ಗೇಟ್‌್ ಮಾಲ್‌ನಲ್ಲಿ ನಡೆದಿದೆ.

ಪಾಕ್ ಉಗ್ರನ ನೇತೃತ್ವ
ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನದ ಅಬು ಮುಸಾ ಮೊಂಬಸಾ ಎಂಬಾತ ನೈರೋಬಿ ಮಾಲ್‌ನಲ್ಲಿ ಗುಂಡಿನ ದಾಳಿ ನಡೆಸಿದ ಶಬಾಬ್ ಉಗ್ರರ ಗುಂಪಿನ ಭದ್ರತೆ  ಹಾಗೂ ತರಬೇತಿ ಮುಖ್ಯಸ್ಥನಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಮೃತರಲ್ಲಿ ಭಾರತೀಯರು
ನವದೆಹಲಿ (ಐಎಎನ್‌ಎಸ್‌):  ‘ನೈರೋಬಿ ಮಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಮಿಳುನಾಡಿನ ಶ್ರೀಧರ್‌ ನಟರಾಜನ್‌ (40) ಹಾಗೂ ಬ್ಯಾಂಕ್ ಆಫ್‌ ಬರೋಡಾದ ಸ್ಥಳೀಯ ವ್ಯವಸ್ಥಾಪಕರ ಪುತ್ರ ಪರಂಶು ಜೈನ್ (8) ಮೃತಪಟ್ಟಿದ್ದಾರೆ’ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಸೈಯದ್‌ ಅಕ್ಬರುದ್ದೀನ್‌ ತಿಳಿಸಿದ್ದಾರೆ.
ಮೃತಪಟ್ಟ ಶ್ರೀಧರ್‌ ಸ್ಥಳೀಯ ಔಷಧ ವ್ಯಾಪಾರಿಯಾಗಿದ್ದಾರೆ.

ಗಾಯಗೊಂಡವರು:  ಶ್ರೀಧರ್ ನಟರಾಜನ್ ಅವರ ಪತ್ನಿ ಮಂಜುಳಾ ಶ್ರೀಧರ್, ಮುಕ್ತಾ ಜೈನ್‌, ಕುಮಾರಿ ಪೂರ್ವಿ ಜೈನ್‌ ಹಾಗೂ ನಟರಾಜನ್‌ ರಾಮಚಂದ್ರನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.