ADVERTISEMENT

ಮಿನಿ ಸ್ಕರ್ಟ್, ಡೀಪ್ ಟಾಪ್‌ಗೆ ನಿರ್ಬಂಧ...

ಸ್ವಾಜಿಲೆಂಡ್‌ನಲ್ಲೂ ಅತ್ಯಾಚಾರದ ಪಿಡುಗು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಎಂಬಬಾನೆ (ಸ್ವಾಜಿಲೆಂಡ್): ಅತ್ಯಾಚಾರ ಪ್ರಚೋದಿಸುವ ಮಿನಿ ಸ್ಕರ್ಟ್, ಎದೆ ಭಾಗ ಪ್ರದರ್ಶಿಸುವಂತಹ ಟಾಪ್, ಲೋರೈಸ್ ಜೀನ್ಸ್‌ಗಳನ್ನು ಮಹಿಳೆಯರು ಧರಿಸಬಾರದು ಎಂದು ಆಫ್ರಿಕಾ ಖಂಡದ ಸಂಪೂರ್ಣ ಅರಸೊತ್ತಿಗೆಯ ರಾಷ್ಟ್ರವಾದ ಸ್ವಾಜಿಲೆಂಡ್ ನಿಷೇಧ ವಿಧಿಸಿದೆ.

ಇದರಿಂದಾಗಿ, 1889ರ ವಸಾಹತುಗಾರರ ಕಾಲದ ಕ್ರಿಮಿನಲ್ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು.

`ಇಂತಹ ಉಡುಪುಗಳನ್ನು ಧರಿಸಿದರೆ ಅತ್ಯಾಚಾರಿಯ ಕೆಲಸ ಸುಲಭವಾಗುತ್ತದೆ. ಏಕೆಂದರೆ, ದೇಹವನ್ನು ಅರೆಬರೆಯಾಗಿ ಮುಚ್ಚುವ ಉಡುಪುಗಳನ್ನು ತೆಗೆಯುವುದು ಆತನಿಗೆ ಸಲೀಸಾಗುತ್ತದೆ' ಎಂದು ಪೊಲೀಸ್ ವಕ್ತಾರೆ ವೆಂಡಿ ಹ್ಲೆಟಾ ಸಮರ್ಥಿಸಿಕೊಂಡಿದ್ದಾರೆ.

ಆದರೆ, ಈ ನಿರ್ಬಂಧವು ಅಲ್ಲಿನ ದೊರೆಯು ಪತ್ನಿಯನ್ನು ಆಯ್ಕೆ ಮಾಡಿಕೊಳ್ಳುವ ವಾರ್ಷಿಕ ನೃತ್ಯ ಕಾರ್ಯಕ್ರಮಕ್ಕೆ ಅನ್ವಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ, ಕನ್ಯೆಯರು ಎದೆಯ ಭಾಗ ಮುಚ್ಚದಂತಹ ಸಾಂಪ್ರದಾಯಿಕ ಉಡುಪು ಧರಿಸಿ ನರ್ತಿಸುತ್ತಾರೆ. ಈಗಿನ ದೊರೆ ಮೂರನೇ ಮಸ್‌ವತಿ ಈಗಾಗಲೇ 13 ಪತ್ನಿಯರನ್ನು ಹೊಂದಿದ್ದು, ಮುಂದಿನ ವಾರ್ಷಿಕ ನೃತ್ಯದ ವೇಳೆ ಮತ್ತೊಬ್ಬಳನ್ನು ಆಯ್ದುಕೊಳ್ಳುವ ನಿರೀಕ್ಷೆ ಇದೆ.

ರಾಷ್ಟ್ರದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ತಮಗೆ ಭದ್ರತೆ ವಾತಾವರಣ ನಿರ್ಮಿಸಬೇಕೆಂದು ಒತ್ತಾಯಿಸಿ ಮಹಿಳೆಯರು ಕೆಲವು ದಿನಗಳ ಹಿಂದೆ ಇಲ್ಲಿ ಪ್ರತಿಭಟನೆ ನಡೆಸಿದ್ದರು.

ಹಿನ್ನೆಲೆಯಲ್ಲಿ ಸ್ವಾಜಿಲೆಂಡ್ ಪ್ರಭುತ್ವ ಉಡುಪು ನಿರ್ಬಂಧದ ಕ್ರಮ ಕೈಗೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.