ADVERTISEMENT

ಮುಂದುವರಿದ ಅಶಾಂತಿ; ಚೀನಾದಲ್ಲೂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 17:35 IST
Last Updated 20 ಫೆಬ್ರುವರಿ 2011, 17:35 IST

ಟ್ರಿಪೊಲಿ/ಮನಾಮ/ಬೀಜಿಂಗ್/ಕೈರೊ (ಐಎಎನ್‌ಎಸ್):  ಅರಬ್ ದೇಶಗಳಲ್ಲಿ ಸರ್ಕಾರಗಳ ವಿರುದ್ಧದ ಪ್ರತಿಭಟನೆ ಮುಂದುವರಿದಿರುವಂತೆಯೇ ಮೊರೊಕ್ಕೊಗೂ ಹರಡಿದೆ. ಲಿಬಿಯಾ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸತ್ತವರ ಸಂಖ್ಯೆ 100 ದಾಟಿದೆ. ಇದರ ಬೆನ್ನಲ್ಲೇ ಚೀನಾದ ಎರಡು ಪ್ರಮುಖ ನಗರಗಳಲ್ಲೂ ಸಾರ್ವಜನಿಕರು ಬೀದಿಗಿಳಿದಿದ್ದರು.

ಈಜಿಪ್ಟ್ ಮತ್ತಿತರ ಅರಬ್ ರಾಷ್ಟ್ರಗಳಲ್ಲಿನ ಜನಾಂದೋಲನದಿಂದ ಪ್ರಭಾವಿತರಾದ ಚೀನಾ ನಾಗರಿಕರು ಭಾನುವಾರ ‘ಮಲ್ಲಿಗೆ ಕ್ರಾಂತಿ’ ಹೆಸರಿನಲ್ಲಿ ಇಂಟರ್‌ನೆಟ್‌ನಲ್ಲಿ ನೀಡಿದ ಕರೆ ಮೇರೆಗೆ ಬೀಜಿಂಗ್ ಮತ್ತು ಶಾಂಘೈ ನಗರಗಳಲ್ಲಿ ಬೀದಿಗಿಳಿದಿದ್ದರು. ಈ ಕರೆಯನ್ನು 13 ನಗರಗಳಿಗೆ ನೀಡಲಾಗಿತ್ತಾದರೂ ಅದನ್ನು ಕೇವಲ ಎರಡು ನಗರಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.

ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಪೊಲೀಸರು ಚದುರಿಸಿದರು. 100ಕ್ಕೂ ಹೆಚ್ಚು ಜನರನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.

ಸತ್ತವರ ಸಂಖ್ಯೆ 104ಕ್ಕೆ: ಈ ಮಧ್ಯೆ, ಲಿಬಿಯಾದಲ್ಲಿ ಭಾನುವಾರ ಕೂಡ ಬಿಗುವಿನ ವಾತಾವರಣವಿತ್ತು. ಸರ್ಕಾರದ ವಿರುದ್ಧ ಬಂಡೆದ್ದು ತೀವ್ರ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಹತ್ತಿಕ್ಕಲು ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಕನಿಷ್ಠ 104 ಜನರು ಮೃತಪಟ್ಟಿದ್ದಾರೆ.

ಸಾಕ್ಷಿದಾರರು ಹಾಗೂ ವೈದ್ಯಕೀಯ ಮೂಲಗಳಿಂದ ಸಂಗ್ರಹಿಸಿದ ಅಂಕಿಸಂಖ್ಯೆ ಆಧರಿಸಿ ಮಾನವ ಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ ಭಾನುವಾರ ಈ ಮಾಹಿತಿಯನ್ನು ಪ್ರಕಟಿಸಿದೆ.

ಬೆಚ್ಚಿಬೀಳಿಸಿದ ದುಃಸ್ವಪ್ನ: ‘ಭೀಕರ ಹತ್ಯಾಕಾಂಡ, ರಕ್ತಪಾತ ಅದಾಗಿತ್ತು’-ಸರ್ಕಾರದ ವಿರುದ್ಧ ನಡೆದ ಜನಾಕ್ರೋಶ, ಸೇನಾ ಕಾರ್ಯಾಚರಣೆ ಬಗ್ಗೆ ಲಿಬಿಯಾದ ಉದ್ಯಮಿ ಅಹಮದ್ ದುಃಸ್ವಪ್ನ ಕಂಡು ಬೆಚ್ಚಿದವರಂತೆ ನೀಡಿದ ಹೇಳಿಕೆ ಇದು. ಬೆಂಗಜಿ ನಗರದ ನಿವಾಸಿಯಾಗಿರುವ  ಅಹಮದ್, ಜನರು ಸರ್ಕಾರದ ವಿರುದ್ಧ ಬಂಡೆದ್ದಾಗ ಸೇನೆ ಅವರನ್ನು ಚಚ್ಚಿದ ರಕ್ತಸಿಕ್ತ ದೃಶ್ಯಾವಳಿಗಳನ್ನು  ‘ಅಲ್ ಜಜೀರಾ’ ವಾಹಿನಿ ಕಾರ್ಯಕ್ರಮದಲ್ಲಿ  ಭಯಭೀತರಾಗಿ ನೆನಪಿಸಿಕೊಂಡರು.

ಎಲ್ಲೆಲ್ಲೂ ಸೈನಿಕರೇ ಇದ್ದರು. ಜನರನ್ನು ಗುಂಡಿನ ಮಳೆಗರೆದು ಬೇಟೆಯಾಡಿದರು. ಆಸ್ಪತ್ರೆಯೊಳಗೂ ನಾವು ಸುರಕ್ಷಿತರಲ್ಲ- ಬೆಂಗಜಿಯ ವೈದ್ಯೆಯೊಬ್ಬರು ಹೇಳಿಕೆ ಇದು. ಆಸ್ಪತ್ರೆಗಳು ಕೂಡ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುವಷ್ಟು ಸುಸಜ್ಜಿತವಾಗಿಲ್ಲ. ದಾಖಲಾಗುವ ಜನರೆಲ್ಲಾ 13-35 ವಯೋಮಾನದವರು,  ಮಿಲಿಟರಿ ಆಯುಧಗಳಿಂದ ಗಂಭೀರ ಗಾಯಗೊಂಡವರು. ಆದರೆ ಪೊಲೀಸರು ಯಾರೂ ಗಾಯಗೊಂಡಿಲ್ಲ ಎಂದು ಮತ್ತೊಬ್ಬ ವೈದ್ಯರು ಕಾರ್ಯಕ್ರಮದಲ್ಲಿ ಹೇಳಿದರು. ಈ ಮಧ್ಯೆ, ಮೊರೊಕ್ಕೊದಲ್ಲೂ ಭಾನುವಾರ ಯುವಕರು ಪ್ರಥಮ ಬಾರಿಗೆ ಪ್ರತಿಭಟನೆ ನಡೆಸಿದರು. ಅಲ್ಲದೇ. ದೇಶದಾದ್ಯಂತ ಶಾಂತಿಯುತ ಚಳವಳಿ ನಡೆಸುವುದಾಗಿ ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.