ADVERTISEMENT

‘ಮೃತ ಸಮುದ್ರ’ದಲ್ಲಿ ಸಂಜೀವಿನಿ ಚಿಕಿತ್ಸೆ

ವಾರ್ಷಿಕವಾಗಿ 3.3 ಅಡಿಯಷ್ಟು ಕುಗ್ಗುತ್ತಿರುವ ವಿಸ್ತಾರ

ಪಿಟಿಐ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಮೃತ ಸಮುದ್ರ
ಮೃತ ಸಮುದ್ರ   

ಟೆಲ್ ಅವೀವ್, ಇಸ್ರೇಲ್ : ಉಪ್ಪಿನಿಂದ ಕೂಡಿರುವ ಕಡುನೀಲಿ ಬಣ್ಣದ ನೀರಿನಲ್ಲಿ ಕೈಯಲ್ಲೊಂದು ಪುಸ್ತಕ ಹಿಡಿದು ಅನಾಯಾಸವಾಗಿ ತೇಲಾಡುವುದು ನಿಜಕ್ಕೂ ವಿಶಿಷ್ಟ ಅನುಭವ ನೀಡುತ್ತದೆ. ಭೂಮಿಯ ಅತ್ಯಂತ ತಗ್ಗಿನ (ಲೋಯೆಸ್ಟ್ ಪಾಯಿಂಟ್) ಪ್ರದೇಶದಲ್ಲಿ ಇದ್ದೇವೆ ಎಂಬ ಹೆಮ್ಮೆಯೂ ಜೊತೆಗಿರುತ್ತದೆ.

ಹೌದು, 30 ಲಕ್ಷ ವರ್ಷ ಇತಿಹಾಸ ಹೊಂದಿರುವ ಮೃತ ಸಮುದ್ರದಲ್ಲಿ (ಡೆಡ್ ಸೀ) ಇಂತಹದೊಂದು ಅನುಭವವನ್ನು ಪ್ರವಾಸಿಗರು ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಭಾರತದಲ್ಲಿರುವ ಇಸ್ರೇಲ್ ಪ್ರವಾಸೋದ್ಯಮ ಸಚಿವಾಲಯದ ನಿರ್ದೇಶಕ ಹಸನ್ ಮದಾ.

‘ಜಗತ್ತಿನಲ್ಲೇ ಅತ್ಯಂತ ಹೆಚ್ಚು ಲವಣಾಂಶದಿಂದ ಕೂಡಿದ ಮೃತ ಸಮುದ್ರದಲ್ಲಿ ತೇಲುತ್ತಿದ್ದರೆ ದೇಹದ ಆಯಾಸ ನೀಗುತ್ತದೆ. ಅತಿಹೆಚ್ಚು ಖನಿಜಾಂಶದಿಂದ ಕೂಡಿರುವ ನೀರಿನಲ್ಲಿರುವ ಕಪ್ಪು ಮಣ್ಣು ಚರ್ಮಕ್ಕೆ ತಾಗುತ್ತಿದ್ದಂತೆ ಹಿತವಾದ ಅನುಭವವಾಗುತ್ತದೆ’ ಎನ್ನುತ್ತಾರೆ ಅವರು.

ADVERTISEMENT

‘ನಿಸರ್ಗ ಸಹಜ ಸೌಂದರ್ಯದ ಜೊತೆ ನೈಸರ್ಗಿಕ ಚಿಕಿತ್ಸಕ ಶಕ್ತಿಯನ್ನೂ ಈ ನೀರು ಹೊಂದಿದೆ. ಇದು ಶಾಂತಿ, ಆರೋಗ್ಯ ಹಾಗೂ ಸ್ಫೂರ್ತಿಯ ತಾಣ’ ಎಂದು ಮದಾ ವಿವರಿಸುತ್ತಾರೆ.

‘ಇಸ್ರೇಲ್‌ನ ಪ್ರವಾಸೋದ್ಯಮ ವರ್ಷದಿಂದ ವರ್ಷಕ್ಕೆ ವರ್ಧಿಸುತ್ತಿದ್ದು, ಜಗತ್ತಿನ ಬಹುತೇಕ ದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರೆ’ ಎನ್ನುವ ಹಸನ್, ಇಸ್ರೇಲ್ ಸುರಕ್ಷಿತ ತಾಣವಲ್ಲ ಎಂಬ ಮಾತನ್ನು ಒಪ್ಪುವುದಿಲ್ಲ.
**
ವೈಶಿಷ್ಟ್ಯಗಳ ಆಗರ
ಮೃತ ಸಮುದ್ರದ ವಿಪರೀತ ಲವಣಾಂಶದ ಕಾರಣ ಇಲ್ಲಿ ಯಾವುದೇ ಜಲಚರಗಳು ಅಥವಾ ಸಮುದ್ರ ಜೀವಿಗಳು ಜೀವಿಸಲು ಸಾಧ್ಯವಿಲ್ಲ. ಇಲ್ಲಿನ ಉಪ್ಪು ಹಾಗೂ ಖನಿಜಾಂಶಗಳನ್ನು ಬಳಸಿ ಗಿಡಮೂಲಿಕೆ ಹಾಗೂ ಸೌಂದರ್ಯವರ್ಧಕಗಳನ್ನು ತಯಾರಿಸಲಾಗುತ್ತಿದೆ.

ಉಪ್ಪಿನ ಸಮುದ್ರ ಎಂದೂ ಕರೆಯಲಾಗುವ ಇದು ಇಸ್ರೇಲ್ ಹಾಗೂ ಜೋರ್ಡಾನ್ ನಡುವೆ ಇದೆ.

ಇದರಿಂದ ಕೇವಲ 40 ಕಿ.ಮೀ ದೂರದಲ್ಲಿ ಕ್ರೈಸ್ತರು, ಮುಸ್ಲಿಮರು ಹಾಗೂ ಯಹೂದಿಗಳ ಪವಿತ್ರ ನಗರವಾದ ಜೆರುಸಲೇಂ ಇದೆ. ಹಿಂದೂಗಳು ಸೇರಿದಂತೆ ಇತರ ಧರ್ಮೀಯರೂ ಇಲ್ಲಿಗೆ ಭೇಟಿ ನೀಡುತ್ತಾರೆ.
**
ಅಂಕಿ–ಅಂಶ

9.6 ಪಟ್ಟು
ಇತರ ಸಮುದ್ರಗಳಿಗೆ ಹೋಲಿಸಿದರೆ ಇಲ್ಲಿರುವ ಉಪ್ಪಿನಂಶದ ಪ್ರಮಾಣ ಹೆಚ್ಚು

428 ಮೀಟರ್
ಸಮುದ್ರ ಮಟ್ಟದಿಂದ ಕೆಳಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.