ನಾಸಾ ಲ್ಯಾಪ್‌ಟಾಪ್ ಕಳವು
ವಾಷಿಂಗ್ಟನ್ (ಐಎಎನ್‌ಎಸ್): ಕಳೆದ ಮಾರ್ಚ್‌ನಲ್ಲಿ ಕಳುವಾಗಿದ್ದ ನಾಸಾದ ಲ್ಯಾಪ್‌ಟಾಪ್ ಕಂಪ್ಯೂಟರ್‌ನಲ್ಲಿ ಅಂತರ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ವನ್ನು ನಿಯಂತ್ರಿಸಲು ಬಳಸುತ್ತಿದ್ದ ಸಂಕೇತಾಕ್ಷರಗಳು ಇ್ದ್ದದವು ಎಂದು ಮಾಧ್ಯಮ ವರದಿಗಳು ಹೇಳಿವೆ.
ಕಂಪ್ಯೂಟರ್ ಸುರಕ್ಷತೆಗೆ ಸಂಬಂಧಿಸಿದಂತೆ 2010-11ರಲ್ಲಿ ನಡೆದ ಘಟನೆಗಳಲ್ಲಿ ಇದೂ ಒಂದು. ಇವು ನಾಸಾ ಕಂಪ್ಯೂಟರ್‌ಗಳಲ್ಲಿ ಹಾನಿಕಾರಕ ಸಾಫ್ಟ್‌ವೇರ್ ಅಳವಡಿಕೆಗೆ ಕಾರಣವಾಗಿವೆ ಎಂದು ನಾಸಾದ ಐಜಿ ಪಾಲ್ ಮಾರ್ಟಿನ್ ಅವೆುರಿಕದ ಜನಪ್ರತಿನಿಧಿಗಳ ಸಭೆಗೆ ಬರೆದ ಪತ್ರವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಹಿಂಸಾಚಾರ: 73 ಸಾವು
ಇಸ್ಲಾಮಾಬಾದ್ (ಪಿಟಿಐ): ವಾಯವ್ಯ ಪಾಕಿಸ್ತಾನದ ಹಿಂಸಾಪೀಡಿತ ಖೈಬರ್ ಬುಡಕಟ್ಟು ಪ್ರದೇಶದಲ್ಲಿ ನಡೆದ 2 ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 73 ಮಂದಿ ಮೃತಪಟ್ಟಿದ್ದಾರೆ.
ಶುಕ್ರವಾರ ಮಸೀದಿಯ ಹೊರಗೆ ಆತ್ಮಹತ್ಯಾ ದಾಳಿಕೋರನೊಬ್ಬ ಸ್ಫೋಟಿಸಿಕೊಂಡ ಪರಿಣಾಮ ಲಷ್ಕರ್-ಎ-ತೊಯ್ಬಾ ಸಂಘಟನೆಯ 23 ಉಗ್ರರು ಸತ್ತಿದ್ದಾರೆ.
ಗುರುವಾರ ನಡೆದ ಘಟನೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ 15 ತಾಲಿಬಾನ್ ಬಂಡುಕೋರರು ಮೃತಪಟ್ಟಿದ್ದಾರೆ.
ತ್ವಚೆ ಕ್ಯಾನ್ಸರ್ ತಡೆಗೆ ವಿಟಮಿನ್ ಮಾತ್ರೆ
ಲಂಡನ್, (ಪಿಟಿಐ): ತ್ವಚೆಯ ಕ್ಯಾನ್ಸರ್‌ನಿಂದ ಪಾರಾಗಬೇಕೇ? ಹಾಗಿದ್ದಲ್ಲಿ ಪ್ರತಿದಿನ ವಿಟಮಿನ್ ಮಾತ್ರೆ ತಿನ್ನಿ ಎನ್ನುತ್ತಾರೆ ಸಂಶೋಧಕರು. ವಿಟಮಿನ್ `ಎ~ ಇರುವ ಪೂರಕ ಆಹಾರವನ್ನು ಸೇವಿಸಿದಲ್ಲಿ ಅದರಲ್ಲೂ ಮಹಿಳೆಯರು `ಮೆಲನೋಮಾ~ ಎಂಬ ತ್ವಚೆಯ ಕ್ಯಾನ್ಸರ್‌ನಿಂದ ದೂರ ಇರಬಹುದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹೊಸ ಅಧ್ಯಯನಕ್ಕಾಗಿ ಕೈಸರ್ ಪರ್ಮನೆಂಟೆ ನಾರ್ತನ್ ಕ್ಯಾಲಿಫೋರ್ನಿಯಾ ವಿಭಾಗದ ಸಂಶೋಧಕರು ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸುಮಾರು ಎಪ್ಪತ್ತು ಸಾವಿರ ಜನರನ್ನು ಬಳಸಿಕೊಂಡಿದ್ದರು ಎನ್ನಲಾಗಿದೆ. ಇವರು ಒಂದೋ ಆಹಾರದ ಮೂಲಕ ಅಥವಾ ಪೂರಕ ಆಹಾರದ ಮೂಲಕ ವಿಟಮಿನ್ `ಎ~ಯನ್ನು ಸೇವಿಸುತ್ತಿದ್ದರು ಎನ್ನಲಾಗಿದೆ.
`ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಷ್ಟವಿಲ್ಲ
ನ್ಯೂಯಾರ್ಕ್ (ಪಿಟಿಐ): ಜೈಪುರ ಸಾಹಿತ್ಯ ಉತ್ಸವದಲ್ಲಿ ಲೇಖಕ ಸಲ್ಮಾನ್ ರಶ್ದಿ ಪಾಲ್ಗೊಳ್ಳುವುದಕ್ಕೆ ವ್ಯಕ್ತವಾದ ವಿರೋಧವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಗಿರುವ ನಷ್ಟವಲ್ಲ. ಆದರೆ, ಬರಹಗಾರರು ಮತ್ತು ಕಾರ್ಯಕ್ರಮ ಸಂಘಟಕರ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ವಿಫಲರಾದ ರಾಜಕೀಯ ಮುಖಂಡರ ನಡವಳಿಕೆ ಕುರಿತು ಇದು ದೇಶವ್ಯಾಪಿ ಚರ್ಚೆಗೆ ಕಾರಣವಾಯಿತು ಎಂದು ಉತ್ಸವದ ಸಹ ಸಂಸ್ಥಾಪಕ ವಿಲಿಯಂ ದಲ್‌ರಿಂಪಲ್ ಅಭಿಪ್ರಾಯ ಪಟ್ಟಿದ್ದಾರೆ.
ರಶ್ದಿ ಅವರು ಉತ್ಸವದಲ್ಲಿ ಪಾಲ್ಗೊಳ್ಳದಿರಲು ಕೈಗೊಂಡ ನಿರ್ಧಾರ ಸರಿಯಾಗಿಯೇ ಇತ್ತು. ಒಂದು ವೇಳೆ ಅವರು ಭಾಗವಹಿಸಿದ್ದರೆ ಹಿಂಸಾಚಾರ ಸಂಭವಿಸುವ ಸಾಧ್ಯತೆ ಇತ್ತು ಅವರು ಹೇಳಿದ್ದಾರೆ.
ಇಲ್ಲಿನ ಏಷ್ಯಾ ಸೊಸೈಟಿಯಲ್ಲಿ ಆಯೋಜಿಸಿರುವ ಮೊಘಲರ ಕಾಲದ ಭಾರತದ ಕಲಾಕೃತಿಗಳ ಪ್ರದರ್ಶನಲ್ಲಿ ಅವರು ರಶ್ದಿ ಅವರನ್ನು ಭೇಟಿ ಮಾಡಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.