ADVERTISEMENT

ಸಾಲದ ಹೊರೆ: ವಿಶ್ವದ ಆಟೋ ರಾಜಧಾನಿ 'ಡೆಟ್ರಾಯಿಟ್ ನಗರ' ದಿವಾಳಿ

ಗುಳೆ ಹೋಗುತ್ತಿರುವ ಜನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 10:31 IST
Last Updated 19 ಜುಲೈ 2013, 10:31 IST

ವಾಷಿಂಗ್ಟನ್ (ಪಿಟಿಐ): ವಿಶ್ವದ ಆಟೋ ರಾಜಧಾನಿ ಎಂದೇ ಖ್ಯಾತಿ ಪಡೆದ ಡೆಟ್ರಾಯಿಟ್ ನಗರ 18 ಶತಕೋಟಿ ಅಮೆರಿಕನ್ ಡಾಲರ್ ಸಾಲದ ಹೊರೆಯಿಂದ ತತ್ತರಿಸಿ 'ದಿವಾಳಿ' ಘೋಷಣೆಗೆ ಕ್ರಮ ಕೈಗೊಂಡಿರುವ ಅಮೆರಿಕದ ಅತಿ ದೊಡ್ಡ ನಗರ ಎನಿಸಿದೆ. ನಗರದ ಜನ ಗುಳೇ ಹೋಗುತ್ತಿದ್ದು ಜನಸಂಖ್ಯೆ 20 ಲಕ್ಷದಿಂದ 70,000ಕ್ಕೆ ಇಳಿದಿದೆ.

'ಡೆಟ್ರಾಯಿಟ್ ನಗರಕ್ಕೆ 'ದಿವಾಳಿ ಕಾಯ್ದೆ' (ಫೆಡರಲ್ ಬ್ಯಾಂಕ್ರಪ್ಟಸಿ ಲಾ) ಅಡಿ ರಕ್ಷಣೆ ಕೋರಲು ಡೆಟ್ರಾಯಿಟ್ ನ ತುರ್ತು ನಿರ್ವಾಹಕನಿಗೆ ನಾನು ಈದಿನ ಅಧಿಕಾರ ನೀಡಿದ್ದೇನೆ'. ಅತ್ಯಂತ ಕಷ್ಟದ, ನೋವಿನ ಹೆಜ್ಜೆ. ಬೇರೆ ಯಾವುದಾದರೂ ಸುಸ್ಥಿರ ಆಯ್ಕೆ ಇದೆಯೆಂದು ನನಗೆ ಅನ್ನಿಸಿದ್ದರೆ ಈ ಕ್ರಮಕ್ಕೆ ನಾನು ಮುಂದಾಗುತ್ತಿರಲಿಲ್ಲ' ಎಂದು ಮಿಷಿಗನ್ ಗವರ್ನರ್ ರಿಕ್ ಸ್ನೈಡೆರ್ ಅವರು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಾದ ವಿಡಿಯೋ ಸಂದೇಶದಲ್ಲಿ ಶುಕ್ರವಾರ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಎರಡು ದಶಲಕ್ಷದಷ್ಟು ಇದ್ದ ಡೆಟ್ರಾಯಿಟ್ ನಗರದ  ಜನಸಂಖ್ಯೆ ಈಗ ಕೇವಲ 70,000ಕ್ಕೆ ಇಳಿದಿದೆ.

'ಡೆಟ್ರಾಯಿಟ್ ನಗರವನ್ನು ಬಾಧಿಸುತ್ತಿದ್ದ ಆರ್ಥಿಕ ವಾಸ್ತವಾಂಶಗಳನ್ನು ದೀರ್ಘಕಾಲದಿಂದ ನಿರ್ಲಕ್ಷಿಸುತ್ತಾ ಬರಲಾಗಿದೆ. ಡೆಟ್ರಾಯಿಟ್ ನಗರದ ಜನತೆಗೆ ಲಭ್ಯವಾಗಬೇಕಾದ ಮೂಲಭೂತ ಸೇವೆಗಳು ತಪ್ಪದಂತಾಗಲು ನಾನು ಈ ಕಠಿಣ ನಿರ್ಧಾರ ಕೈಗೊಂಡಿದ್ದೇನೆ.  ಈ ಮೂಲಕವಾದರೂ ನಮಗೆ ಡೆಟ್ರಾಯಿಟ್ ನಗರಕ್ಕೆ ಸುಭದ್ರ ಆರ್ಥಿಕ ನೆಲೆ ಒದಗಿಸಿಕೊಟ್ಟು ಅದು ಭವಿಷ್ಯದಲ್ಲಿ ಸಂಪದ್ಭರಿತ ನಗರವಾಗಿ ಬೆಳೆಯುವಂತೆ ಮಾಡಲು ಸಾಧ್ಯವಾಗಬಹುದು' ಎಂದು ಗವರ್ನರ್ ಹೇಳಿದ್ದಾರೆ.

ದಿವಾಳಿ ಘೋಷಣೆಯ ಕ್ರಮ ಅತ್ಯಂತ ಕಠಿಣ ಹೆಜ್ಜೆ ಎಂದು ಸ್ನೈಡರ್ ಹೇಳಿದ್ದಾರೆ. 'ಆದರೆ ಆರು ದಶಕದಿಂದ ಕಾಡಿದ ಸಮಸ್ಯೆಯನ್ನು ಬಗೆಹರಿಸಲು ಇದೊಂದೇ ಸುಸ್ಥಿರ ಆಯ್ಕೆಯಾಗಿತ್ತು' ಎಂದು ಅವರು ಹೇಳಿದ್ದಾರೆ.

ಈ ನಿರ್ಧಾರದ ಪರಿಣಾಮವಾಗಿ ಡೆಟ್ರಾಯಿಟ್ ನ ತುರ್ತು ನಿರ್ವಾಹಕ ಕೆವ್ಯಿನ್ ಒರ್ ಅವರು ದಿವಾಳಿ ಕಾಯ್ದೆಯ (ಫೆಡರಲ್ ಬ್ಯಾಂಕ್ರಪ್ಟಸಿ ಲಾ) 9ನೇ ಅಧ್ಯಾಯದ ಅಡಿಯಲ್ಲಿ ದಿವಾಳಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.

ಕಾಯ್ದೆಯ 9ನೇ ಅಧ್ಯಾಯವು ಆರ್ಥಿಕ ದುಃಸ್ಥಿತಿಯಲ್ಲಿ ಇರುವ ನಗರ ಸಭೆಗಳಿಗೆ ಸಾಲಗಾರರ ಕಾಟದಿಂದ ರಕ್ಷಣೆ ಒದಗಿಸುತ್ತದೆ. ಈ ಕಾಯ್ದೆಯ ಪ್ರಕಾರ ಸಾಲದ ವಿಚಾರವನ್ನು ದಿವಾಳಿ ನ್ಯಾಯಾಧೀಶರ ನಿರ್ದೇಶನ ಪ್ರಕಾರವೇ ಪರಿಹಾರಿಸಬೇಕಾಗುತ್ತದೆ.

ಡೆಟ್ರಾಯಿಟ್ ನಗರದ ಸಾಲದ ಹೊರೆ 18 ಶತಕೋಟಿ ಅಮೆರಿಕನ್ ಡಾಲರ್ ಗಳಿಗೂ ಹೆಚ್ಚಾಗಿದ್ದು, ಕರ್ತವ್ಯಗಳ ನಿಭಾವಣೆಗೆ ಹಣ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಮಿಷಿಗನ್ ರಾಜಧಾನಿಯಲ್ಲಿ ಅತ್ಯಂತ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ಡೆಟ್ರಾಯಿಟ್ ನಗರದ ಜನತೆಗೆ ಈ ಆರ್ಥಿಕ ಕೊರತೆಯ ಕಾರಣದಿಂದಾಗಿ ಅತ್ಯಗತ್ಯ ಮೂಲಭೂತ ಸೇವೆಗಳನ್ನು ಒದಗಿಸುವುದೂ ದುರ್ಭರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.