ADVERTISEMENT

ಅಮೆರಿಕದಲ್ಲಿ 24 ಗಂಟೆಯೊಳಗೆ ಎರಡನೇ ಗುಂಡಿನ ದಾಳಿ; ಓಹಿಯೊದಲ್ಲಿ 10 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 11:48 IST
Last Updated 4 ಆಗಸ್ಟ್ 2019, 11:48 IST
   

ಡೇಟನ್‌: ಓಹಿಯೊದಲ್ಲಿನ ಡೇಟನ್ನಲ್ಲಿ ಭಾನುವಾರ ನಡೆದಿರುವ ಗುಂಡಿನ ದಾಳಿಯಲ್ಲಿ ಒಂಬತ್ತು ಮಂದಿ ಸಾವಿಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಾಳಿಕೋರಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. 24 ಗಂಟೆಗಳಲ್ಲಿ ಅಮೆರಿಕದಲ್ಲಿ ನಡೆದಿರುವ ಎರಡನೇ ಸಾಮೂಹಿಕ ದಾಳಿ ಇದಾಗಿದೆ.

ಅರೆಗಾನ್‌ನ ಪ್ರಮುಖ ಬಾರ್‌ವೊಂದರಲ್ಲಿ ರಾತ್ರಿ 1 ಗಂಟೆಗೆ ಈ ಘಟನೆ ನಡೆದಿರುವುದಾಗಿ ಪೊಲೀಸ್‌ ಲೆಫ್ಟಿನೆಂಟ್‌ ಕರ್ನಲ್‌ ಮ್ಯಾಟ್‌ ಕಾರ್ಪರ್‌ ಹೇಳಿದ್ದಾರೆ. ಒಬ್ಬ ವ್ಯಕ್ತಿ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ಪೊಲೀಸರ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟಿದ್ದಾನೆ. ಕಾರ್ಯಾಚರಣೆಯಲ್ಲಿ ಯಾವುದೇ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿಲ್ಲ ಎಂದಿದ್ದಾರೆ.

ದಾಳಿಕೋರ ಹಲವು ಸುತ್ತುಗಳು ಗುಂಡಿನ ದಾಳಿ ನಡೆಸಿದ್ದು, ಅದರಿಂದಾಗಿ 9 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಾಯಗೊಂಡಿರುವ ಸುಮಾರು 16 ಜನರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖಾ ತಂಡ ಎಫ್‌ಬಿಐ ಸಹ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ.

ADVERTISEMENT

ಅತ್ಯಂತ ಸುರಕ್ಷಿತ ಸ್ಥಳವಾಗಿರುವ ಡೇಟನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ದಾಳಿ ನಡೆಯುವ ಸಮಯದಲ್ಲಿ ಹೆಚ್ಚು ಮಂದಿ ಪೊಲೀಸರು ಸ್ಥಳದಲ್ಲಿದ್ದ ಕಾರಣ, ಇನ್ನೂ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ ಎನ್ನಲಾಗಿದೆ.

ಈ ಘಟನೆಗೂ ಮುನ್ನ ಶನಿವಾರ ಬಂದೂಕು ಹಿಡಿದ ಯುವಕ ಟೆಕ್ಸಾಸ್‌ನ ವಾಲ್‌ಮಾರ್ಟ್‌ ಮಳಿಗೆಯೊಂದಕ್ಕೆ ಪ್ರವೇಶಿಸಿ ಮನಸ್ಸೇಚ್ಛೆ ಗುಂಡಿನ ದಾಳಿ ನಡೆಸಿದ. ದಾಳಿಯಲ್ಲಿ 20 ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ. 25 ಮಂದಿ ಗಾಯಗೊಂಡಿದ್ದು ದಾಳಿಕೋರನನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.