ವಾಷಿಂಗ್ಟನ್: ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತವು ಶೇ 100ರಷ್ಟು ಸುಂಕ ವಿಧಿಸುತ್ತದೆ. ಇತರ ದೇಶಗಳು ಹೆಚ್ಚು ಸುಂಕ ವಿಧಿಸುವುದರಿಂದ ಅಮೆರಿಕದ ಉತ್ಪನ್ನಗಳನ್ನು ಆ ರಾಷ್ಟ್ರಗಳಿಗೆ ರಫ್ತು ಮಾಡುವುದು ‘ವಾಸ್ತವವಾಗಿ ಅಸಾಧ್ಯ’ ಎಂದು ಅಮೆರಿಕ ಹೇಳಿದೆ.
ಭಾರತ ಮತ್ತು ಇತರ ದೇಶಗಳು ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿರುವುದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಸಲ ಟೀಕಿಸಿದ್ದಾರೆ.
ಭಾರತ ಒಳಗೊಂಡಂತೆ ಕೆಲವು ದೇಶಗಳ ಸರಕುಗಳ ಮೇಲೆ ಟ್ರಂಪ್ ಘೋಷಿಸಿರುವ ಪ್ರತಿ ಸುಂಕ ನೀತಿಯು ಏಪ್ರಿಲ್ 2ರಂದು ಜಾರಿಗೆ ಬರಲಿದೆ. ಇದು ಅಮೆರಿಕದ ‘ವಿಮೋಚನಾ ದಿನ’ ಎಂದು ಅವರು ಟ್ರಂಪ್ ಈಗಾಗಲೇ ಹೇಳಿದ್ದಾರೆ.
‘ದುರದೃಷ್ಟವಶಾತ್, ಈ ದೇಶಗಳು ಹಲವು ವರ್ಷಗಳಿಂದ ನಮ್ಮ ಹಣವನ್ನು ಸುಲಿಗೆ ಮಾಡುತ್ತಿವೆ ಮತ್ತು ಅಮೆರಿಕದ ಕಾರ್ಮಿಕರ ಬಗ್ಗೆ ಅವುಗಳು ತಿರಸ್ಕಾರ ಮನೋಭಾವ ಹೊಂದಿವೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ಟೀಕಿಸಿದ್ದಾರೆ.
ಎಷ್ಟು ಪ್ರಮಾಣದಲ್ಲಿ ಪ್ರತಿ ಸುಂಕ ವಿಧಿಸಲಾಗುತ್ತದೆ ಮತ್ತು ಅವು ಯಾವೆಲ್ಲಾ ದೇಶಗಳ ಮೇಲೆ ಪರಿಣಾಮ ಬೀರಲಿವೆ ಎಂಬುದನ್ನು ಲೆವಿಟ್ ವಿವರಿಸಲಿಲ್ಲ. ‘ನಿಸ್ಸಂಶಯವಾಗಿ ಪ್ರತಿ ಸುಂಕವನ್ನು ವಿಧಿಸಲಾಗುತ್ತಿದ್ದು, ಅದನ್ನು ಅಧ್ಯಕ್ಷರು (ಟ್ರಂಪ್) ಬುಧವಾರ ಘೋಷಿಸಲಿದ್ದಾರೆ’ ಎಂದರು.
‘ಅಮೆರಿಕದ ಡೇರಿ ಉತ್ಪನ್ನಗಳ ಮೇಲೆ ಯುರೋಪಿಯನ್ ಯೂನಿಯನ್ ಶೇ 50 ಸುಂಕ ವಿಧಿಸುತ್ತಿದ್ದರೆ, ನಾವು ಕಳುಹಿಸುವ ಅಕ್ಕಿಯ ಮೇಲೆ ಜಪಾನ್ ಶೇ 700ರಷ್ಟು ಸುಂಕ ವಿಧಿಸುತ್ತದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತವು ಶೇ 100ರಷ್ಟು ಸುಂಕ ಮತ್ತು ಅಮೆರಿಕದ ಬೆಣ್ಣೆ ಹಾಗೂ ಚೀಸ್ ಮೇಲೆ ಕೆನಡಾ ಶೇ 300ರಷ್ಟು ಸುಂಕ ವಿಧಿಸುತ್ತಿವೆ’ ಎಂದು ಲೆವಿಟ್ ಮಾಹಿತಿ ನೀಡಿದರು.
‘ಹೆಚ್ಚಿನ ಪ್ರಮಾಣದ ಸುಂಕದಿಂದ ಕಳೆದ ಕೆಲವು ದಶಕಗಳಲ್ಲಿ ಅಮೆರಿಕದ ಹಲವು ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.