ADVERTISEMENT

ಚೀನಾದಲ್ಲಿ ಭಾರಿ ಮಳೆ: 15 ಮಂದಿ ಸಾವು, ಮೂವರು ನಾಪತ್ತೆ

ಪಿಟಿಐ
Published 12 ಅಕ್ಟೋಬರ್ 2021, 12:50 IST
Last Updated 12 ಅಕ್ಟೋಬರ್ 2021, 12:50 IST
ಚೀನಾದ ಉತ್ತರ ಶಾಂಕ್ಸಿ ಪ್ರಾಂತ್ಯದಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹ ಉಂಟಾಗಿರುವ ಸ್ಥಳಗಳ ವೈಮಾನಿಕ ನೋಟ– ಎಎಫ್‌ಪಿ
ಚೀನಾದ ಉತ್ತರ ಶಾಂಕ್ಸಿ ಪ್ರಾಂತ್ಯದಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹ ಉಂಟಾಗಿರುವ ಸ್ಥಳಗಳ ವೈಮಾನಿಕ ನೋಟ– ಎಎಫ್‌ಪಿ   

ಬೀಜಿಂಗ್: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಿರಂತರ ಮಳೆ ಮತ್ತು ಬಿರುಗಾಳಿಯಿಂದಾಗಿ ಕನಿಷ್ಠ 15 ಜನರು ಸಾವಿಗೀಡಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಇದುವರೆಗೆ ಒಟ್ಟು 1.20 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಲ್ಲಿನ ಸರ್ಕಾರ ಮಂಗಳವಾರ ಹೇಳಿದೆ.

ಶಾಂಕ್ಸಿ ಪ್ರಾಂತ್ಯದಲ್ಲಿ ಅ. 2ರಿಂದ 7ರವರೆಗೆ ದಾಖಲೆ ಮಟ್ಟದಲ್ಲಿ ಮಳೆಯಾಗಿದ್ದು, ಭಾರಿ ಪ್ರವಾಹ ಉಂಟಾಗಿದೆ. ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚಿನ ಜನರಿಗೆ ವಸತಿ ಸಮಸ್ಯೆ ಎದುರಾಗಿದೆ. ಇದುವರೆಗೆ ಸುಮಾರು 1.20ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ಮಳೆಯಿಂದಾಗಿ ಸುಮಾರು 2,38,460 ಹೆಕ್ಟೇರ್‌ಗಳಷ್ಟು ಬೆಳೆ ನಾಶಗೊಂಡಿದ್ದು, 37,700 ಮನೆಗಳಿಗೆ ಹಾನಿಯುಂಟಾಗಿದೆ. ಸುಮಾರು ₹ 58 ಶತಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಸ್ಥಳೀಯ ಕ್ಸಿನುವಾ ಸುದ್ದಿಮಾಧ್ಯಮ ವರದಿ ಮಾಡಿದೆ.

ADVERTISEMENT

ಶಾಂಕ್ಸಿ ಪ್ರಾಂತ್ಯದಲ್ಲಿ ವಾಡಿಕೆಗಿಂತಲೂ ಐದು ಪಟ್ಟು ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದ್ದು, ಇದರಿಂದಾಗಿ ಸೇತುವೆಗಳು, ರೈಲು ಮಾರ್ಗಗಳು ಹಾನಿಗೀಡಾಗಿವೆ. ಈ ಪ್ರಾಂತ್ಯವು ಪ್ರಮುಖ ಕಲ್ಲಿದ್ದಲು ಉತ್ಪಾದನಾ ಪ್ರದೇಶವಾಗಿದ್ದು, ಇದುವರೆಗೆ 60 ಕಲ್ಲಿದ್ದಲು ಗಣಿಗಳನ್ನು ಮುಚ್ಚಲಾಗಿದೆ. ಹಾಗಾಗಿ, ಚೀನಾದಲ್ಲಿ ಇಂಧನ ಸಮಸ್ಯೆ ಉಂಟಾಗಿದೆ ಎಂದೂ ವರದಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.