ADVERTISEMENT

ಎಚ್‌–1ಬಿ ವೀಸಾ ಶುಲ್ಕ ಹೆಚ್ಚಳಕ್ಕೆ ಅಮೆರಿಕದ 19 ರಾಜ್ಯಗಳಿಂದ ವಿರೋಧ! ಮೊಕದ್ದಮೆ

ಪಿಟಿಐ
Published 13 ಡಿಸೆಂಬರ್ 2025, 14:41 IST
Last Updated 13 ಡಿಸೆಂಬರ್ 2025, 14:41 IST
   

ನ್ಯೂಯಾರ್ಕ್‌/ವಾಷಿಂಗ್ಟನ್‌: ಎಚ್‌–1ಬಿ ವೀಸಾಗೆ ಹೊಸದಾಗಿ ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಸುಮಾರು ₹90 ಲಕ್ಷ) ಹೆಚ್ಚಿಸಿರುವ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದ 19 ರಾಜ್ಯಗಳು ಮೊಕದ್ದಮೆ ದಾಖಲಿಸಿವೆ. 

‘ಎಚ್‌–1ಬಿ ವೀಸಾ ಶುಲ್ಕ ಹೆಚ್ಚಳವು ಕಾನೂನುಬಾಹಿರ ನಿರ್ಧಾರ. ದೇಶದ ಆರೋಗ್ಯ, ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸಲಿದೆ’ ಎಂದು ರಾಜ್ಯಗಳು ಎಚ್ಚರಿಕೆ ನೀಡಿವೆ. 

ನ್ಯೂಯಾರ್ಕ್‌ನ ಅಟಾರ್ನಿ ಜನರಲ್‌ ಲೆಟಿಟಿಯಾ ಜೇಮ್ಸ್‌ ಮತ್ತು ಇತರೆ 18 ಮಂದಿ ಅಟಾರ್ನಿ ಜನರಲ್‌ಗಳು ಶುಕ್ರವಾರ ಅಮೆರಿಕದ ಮ್ಯಾಸಚೂಸೆಟ್ಸ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಕಾನೂನು ಪ್ರಕ್ರಿಯೆ ಅನುಸರಿಸದೆ ಭಾರಿ ಪ್ರಮಾಣದಲ್ಲಿ ಶುಲ್ಕ ಹೆಚ್ಚಿಸಿರುವುದನ್ನು ಪ್ರಶ್ನಿಸಿದ್ದಾರೆ.

ADVERTISEMENT

ಕೌಶಲ ಹೊಂದಿರುವ, ನುರಿತ ವಿದೇಶಿ ವೃತ್ತಿಪರರಿಗೆ ತಾತ್ಕಾಲಿಕವಾಗಿ ಅಮೆರಿಕದಲ್ಲಿ ಕೆಲಸ ಮಾಡಲು ಎಚ್‌–1ಬಿ ವೀಸಾ ಕಾರ್ಯಕ್ರಮವು ಅವಕಾಶ ಕಲ್ಪಿಸುತ್ತದೆ. ಎಚ್‌–1ಬಿ ವೀಸಾದ ಸೌಲಭ್ಯ ಪಡೆದಿರುವವರಲ್ಲಿ ಹೆಚ್ಚಿನವರು ಭಾರತೀಯರೇ ಇದ್ದಾರೆ. 

ಎಚ್‌–1ಬಿ ವೀಸಾ ಕಾರ್ಮಿಕರನ್ನೇ ಅವಲಂಬಿಸಿರುವ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ವೈದ್ಯರು, ದಾದಿಯರು, ಶಿಕ್ಷಕರ ಕೊರತೆ ಉಂಟಾಗಲಿದೆ. ನ್ಯೂಯಾರ್ಕ್‌ನ ಜನರು ಗುಣಮಟ್ಟದ ಆರೋಗ್ಯ ಸೇವೆ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಪರದಾಡಬೇಕಾಗುತ್ತದೆ. ಟ್ರಂಪ್‌ ಆಡಳಿತದ ನಿರ್ಧಾರವು ಅಮೆರಿಕದ ಆರ್ಥಿಕತೆಗೆ ಪೆಟ್ಟು ನೀಡುತ್ತದೆ. ವಲಸಿಗ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಈ ಕ್ರಮವನ್ನು ನಾವು ಖಂಡಿಸುತ್ತೇವೆ’ ಎಂದು ಲೆಟಿಟಿಯಾ ಜೇಮ್ಸ್‌ ಹೇಳಿದ್ದಾರೆ.

ಎಚ್‌–1ಬಿ ವೀಸಾ ಶುಲ್ಕ ಹೆಚ್ಚಿಸಿ, ಟ್ರಂಪ್‌ ಅವರು ಸೆಪ್ಟೆಂಬರ್ 19ರಂದು ಆದೇಶ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.