ADVERTISEMENT

1984ರ ಗಲಭೆ- ಕಮಲ್‌ನಾಥ್ ಪ್ರಕರಣ: ತೀರ್ಪು ಕಾಯ್ದಿಟ್ಟ ಕೋರ್ಟ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ನ್ಯೂಯಾರ್ಕ್ (ಐಎಎನ್‌ಎಸ್): 1984ರ ಸಿಖ್ ವಿರೋಧಿ ಗಲಭೆಯಲ್ಲಿ ತಮ್ಮ ಪಾತ್ರವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜತಾಂತ್ರಿಕ ವಿನಾಯಿತಿ ನೀಡಬೇಕೆಂದು ಕೋರಿದ್ದ ಭಾರತದ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ಹೇಳಿಕೆ  ಕುರಿತ ತೀರ್ಪನ್ನು ಅಮೆರಿಕದ ಫೆಡರಲ್ ನ್ಯಾಯಾಲಯವು  ಕಾಯ್ದಿರಿಸಿದೆ.

 `ನ್ಯಾಯಕ್ಕಾಗಿ ಸಿಖ್ಖರು~ (ಎಸ್‌ಎಫ್‌ಜೆ) ಎಂಬ ಅಮೆರಿಕ ಮೂಲದ ಮಾನವ ಹಕ್ಕು ಸಮರ್ಥನಾ ತಂಡವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಸುಮಾರು 45 ನಿಮಿಷಗಳವರೆಗೆ ವಾದಗಳನ್ನು ಆಲಿಸಿದ ಬಳಿಕ ಫೆಡರಲ್ ನ್ಯಾಯಾಲಯದ ನ್ಯಾಯಮೂರ್ತಿ ರಾಬರ್ಟ್ ಡಬ್ಲ್ಯು. ಸ್ವೀಟ್ ತೀರ್ಪನ್ನು ಕಾಯ್ದಿರಿಸಿದರು.

ಕಮಲ್‌ನಾಥ್ ಅವರು, ರಾಜತಾಂತ್ರಿಕ ವಿನಾಯಿತಿ ನೀಡಬೇಕೆಂಬ ತಮ್ಮ ಮನವಿಗೆ ಪೂರಕವಾಗಿ ಅಮೆರಿಕದ ವಿದೇಶಾಂಗ ಇಲಾಖೆಯಿಂದ `ಶಿಫಾರಸು ಹೇಳಿಕೆ~ ಒದಗಿಸಲು ಬುಧವಾರದ ವಿಚಾರಣೆಯಲ್ಲಿ ವಿಫಲರಾಗಿದ್ದರು ಎಂದು ಎಸ್‌ಎಫ್‌ಜಿ ಕಾನೂನ ಸಲಹೆಗಾರರು ಹೇಳಿದ್ದಾರೆ.

ದೆಹಲಿಯ ಗುರುದ್ವಾರ ರಾಕಬ್ ಗಂಜ್‌ನಲ್ಲಿ 1984ರ ನವೆಂಬರ್‌ನಲ್ಲಿ ನಡೆದ ದಾಳಿಯಲ್ಲಿ ಕಮಲ್‌ನಾಥ್ ಪಾತ್ರವಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕಮಲ್‌ನಾಥ್ ರಾಜತಾಂತ್ರಿಕ ವಿನಾಯಿತಿ ಕೋರಿದ್ದರು. ಇದಕ್ಕೆ  ತಂಡವು ಆ. 12ರಂದು ತನ್ನ ಪ್ರತಿಕ್ರಿಯೆಯನ್ನು ದಾಖಲಿಸಿತ್ತು.

ಕಮಲ್‌ನಾಥ್ 2010ರ ಏಪ್ರಿಲ್ 6ರಂದು ಸಮನ್ಸ್ ಸ್ವೀಕರಿಸಿದ್ದರೂ 21 ದಿನಗಳೊಳಗೆ ಪ್ರತಿಕ್ರಿಯೆ ನೀಡದ ಕಾರಣ ಅವರ ವಿರುದ್ಧ ನ್ಯಾಯಾಲಯಕ್ಕೆ ಗೈರು ಹಾಜರಿ ತೀರ್ಪು ಹೊರಡಿಸಬೇಕು ಎಂದು ಎಸ್‌ಎಫ್‌ಜೆ ಮನವಿ ಮಾಡಿತ್ತು.

ನ್ಯಾಯಾಲಯವು `ನ್ಯಾಯದರ್ಶಿ ಮಂಡಳಿ~ಯಿಂದ ವಿಚಾರಣೆ ನಡೆಸಬೇಕು. ಆಗ ಫಿರ್ಯಾದಿದಾರರು 1984ರ ಗಲಭೆಯಲ್ಲಿ ಕಮಲ್‌ನಾಥ್ ಮತ್ತು ಕಾಂಗ್ರೆಸ್‌ನ ಇತರ ನಾಯಕರು ಭಾಗಿಯಾಗಿರುವ ಬಗ್ಗೆ ಸಾಕ್ಷ್ಯ ಮಂಡಿಸುವರು ಎಂದೂ ತಂಡ ಹೇಳಿತ್ತು.

ಶನಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭಾಷಣ ಮಾಡುವ ಸಂದರ್ಭದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಲು ಸಿಖ್ ತಂಡವು ಆಲೋಚಿಸಿದೆ. ಕಮಲ್‌ನಾಥ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಮತ್ತು 1984ರ ಗಲಭೆಯಲ್ಲಿ ಭಾಗಿಯಾದ ಆರೋಪವಿರುವ ಕಾಂಗ್ರೆಸ್ ನಾಯಕರನ್ನು ವಿಚಾರಣೆಗೆ ಒಳಪಡಿಸಬೇಕೆಂದು ತಂಡ ಆಗ್ರಹಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.