ADVERTISEMENT

1985ರ ಏರ್ ಇಂಡಿಯಾ ಬಾಂ‌ಬ್ ದಾಳಿ ಪ್ರಕರಣ; ಖುಲಾಸೆಗೊಂಡಿದ್ದವ ಕೆನಡಾದಲ್ಲಿ ಹತ್ಯೆ

ಏಜೆನ್ಸೀಸ್
Published 15 ಜುಲೈ 2022, 5:05 IST
Last Updated 15 ಜುಲೈ 2022, 5:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಒಟ್ಟಾವ (ಕೆನಡಾ): 329 ಜನರ ಸಾವಿಗೆ ಕಾರಣವಾಗಿದ್ದ 1985ರ ಏರ್‌ ಇಂಡಿಯಾ ಬಾಂಬ್‌ ದಾಳಿ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ವ್ಯಕ್ತಿಕೆನಡಾದಲ್ಲಿ ಗುರುವಾರ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

ಹತ್ಯೆಯಾಗಿರುವ ರಿಪುದಮನ್‌ ಸಿಂಗ್‌ ಮಲಿಕ್‌, ಈ ಹಿಂದೆ ಸಿಖ್‌ ಪ್ರತ್ಯೇಕವಾದಿ ಖಲಿಸ್ತಾನ ಚಳವಳಿಯನ್ನು ಬೆಂಬಲಿಸಿದ್ದ. 1985ರ ಬಾಂಬ್‌ ದಾಳಿ ಪ್ರಕರಣದಲ್ಲಿ ಸಾಕ್ಷಿಯ ಕೊರತೆಯಿಂದಾಗಿ ಶಿಕ್ಷೆಯಿಂದ ಪಾರಾಗಿದ್ದ. ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿರುವ ವ್ಯಾಂಕೊವರ್‌ ನಗರದಲ್ಲಿರುವ ಆತನ ಬಟ್ಟೆ ಅಂಗಡಿ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ದಿ ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸರು ಮೃತ ವ್ಯಕ್ತಿಯ ಹೆಸರನ್ನು ಖಚಿತಪಡಿಸಿಲ್ಲ. ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ADVERTISEMENT

'ಇದು ಉದ್ದೇಶಿತ ಗುಂಡಿನ ದಾಳಿ ಎನ್ನುವಂತೆ ತೋರುತ್ತಿದೆ' ಎಂದು ಪೊಲೀಸ್‌ ಸಿಬ್ಬಂದಿ ಸರಬ್‌ಜಿತ್‌ ಸಂಘ ಹೇಳಿದ್ದು, ದಾಳಿಕೋರರು ಬಳಸಿದ್ದರು ಎನ್ನಲಾಗಿರುವ ವಾಹನವು ಕೆಲವು ಕಿ.ಮೀ ದೂರದಲ್ಲಿ ಸುಟ್ಟು ಭಸ್ಮವಾಗಿದೆ. ಆರೋಪಿಗಳು ಮತ್ತೊಂದು ವಾಹನದಲ್ಲಿ ಪರಾರಿಯಾಗಿದ್ದಾರೆ. ಅದಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆಎಂದೂ ಹೇಳಿದ್ದಾರೆ.

ಐರ್ಲೆಂಡ್‌ ಕರಾವಳಿ ಪ್ರದೇಶದಲ್ಲಿ 'ಏರ್‌ ಇಂಡಿಯಾ ವಿಮಾನ 182' ಮೇಲೆ ನಡೆದ ದಾಳಿ ವೇಳೆ, 22 ಸಿಬ್ಬಂದಿಯೂ ಸೇರಿದಂತೆ ಒಟ್ಟು 329 ಮಂದಿ ಮೃತಪಟ್ಟಿದ್ದರು. ಜಪಾನ್‌ನ ನರಿಟ ವಿಮಾನ ನಿಲ್ದಾಣದಲ್ಲಿಯೂ ಮತ್ತೊಂದು ಬಾಂಬ್‌ ಸ್ಫೋಟಗೊಂಡು ವಿಮಾನಕ್ಕೆ ಸರಕು ತುಂಬಿಸುತ್ತಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು.

ಈ ಎರಡೂ ಸ್ಫೋಟಕ್ಕೆ ಬಳಿಸಿದ್ದ ಬಾಂಬ್‌ ಸ್ಯೂಟ್‌ಕೇಸ್‌, ಸಿಖ್‌ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ವ್ಯಾಂಕೋವರ್‌ನಲ್ಲಿ ಪತ್ತೆಯಾಗಿತ್ತು.

ಬಾಂಬ್‌ ತಯಾರಿಕೆ ಮತ್ತು ಇತರ ಸಹಚರರ ಕುರಿತು ಸುಳ್ಳು ಮಾಹಿತಿ ನೀಡಿದ್ದ ಇಂದರ್ಜಿತ್‌ ಸಿಂಗ್‌ ರೆಯಾತ್‌, ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಏಕೈಕ ವ್ಯಕ್ತಿಯಾಗಿದ್ದಾನೆ.

ಮಲಿಕ್‌ ಹಾಗೂ ಮತ್ತೊಬ್ಬ ಶಂಕಿತ ಅಜೈಬ್‌ ಸಿಂಗ್‌ ಬಗ್ರಿ 2005ರಲ್ಲಿ ಪ್ರಕರಣದಿಂದ ಖುಲಾಸೆಗೊಂಡಿದ್ದರು.

ಎರಡು ದಶಕಗಳ ಕಾಲ ಸೆರೆವಾಸದಲ್ಲಿದ್ದ ರೆಯಾತ್‌ಗೆ 2016ರಲ್ಲಿ ಪೆರೋಲ್‌ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.