ADVERTISEMENT

ಭಾರತ ಮೂಲದ ಅಮೆರಿಕನ್ನರ ಚಿಂತೆ ಹೆಚ್ಚಿಸಿದೆ ಕೋವಿಡ್‌

ಬಹುತೇಕ ಎಲ್ಲರ ಜೀವನಶೈಲಿಯಲ್ಲಿ ಬದಲಾವಣೆ

ಪಿಟಿಐ
Published 28 ಜೂನ್ 2020, 7:38 IST
Last Updated 28 ಜೂನ್ 2020, 7:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ‘ಅಮೆರಿಕದಲ್ಲಿರುವ ಭಾರತೀಯರ ಪೈಕಿ ಪ್ರತಿ ಐವರಲ್ಲಿ ಇಬ್ಬರು ತಮ್ಮ ದೀರ್ಘಾವಧಿಯ ಹಣಕಾಸು ಯೋಜನೆ ಹಾಗೂ ಸ್ಥಿರತೆಯ ಬಗ್ಗೆ ಚಿಂತಿತರಾಗಿದ್ದಾರೆ. ಮಾತ್ರವಲ್ಲ, ಬಹುತೇಕ ಎಲ್ಲರೂ ತಮ್ಮ ಜೀವನಶೈಲಿಯನ್ನು ಬದಲಿಸಿಕೊಂಡಿದ್ದಾರೆ’ ಎಂಬುದು ‘ಫೌಂಡೇಷನ್‌ ಫಾರ್‌ ಇಂಡಿಯಾ ಆ್ಯಂಡ್‌ ಇಂಡಿಯನ್‌ ಡಾಯಸ್ಪೋರಾ ಸ್ಟಡೀಸ್‌ (ಎಫ್‌ಐಐಡಿಎಸ್‌)’ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಕೋವಿಡ್‌–19 ಭಾರತೀಯರ ಮೇಲೆ ಯಾವ ಪರಿಣಾಮ ಉಂಟುಮಾಡಿದೆ ಮತ್ತು ಸಮುದಾಯವು ಇದಕ್ಕೆ ಹೇಗೆ ಸ್ಪಂದಿಸಿದೆ ಎಂಬುದನ್ನು ತಿಳಿಯಲು ಇದೇ ಮೊದಲ ಬಾರಿಗೆ ಎಫ್‌ಐಐಡಿಎಸ್‌ ಇಂಥ ಅಧ್ಯಯನವನ್ನು ನಡೆಸಿದೆ.

‘ಶೇ 30ರಷ್ಟು ಭಾರತೀಯ ಅಮೆರಿಕನ್ನರ ಉದ್ಯೋಗ ಹಾಗೂ ಆರ್ಥಿಕತೆಯ ಮೇಲೆ ಕೋವಿಡ್‌–19 ಪರಿಣಾಮ ಉಂಟುಮಾಡಿದೆ. ಇಂಥ ಆರು ಮಂದಿಯಲ್ಲಿ ಒಬ್ಬರು ಸ್ವತಃ ಸೋಂಕಿಗೆ ಒಳಗಾಗಿದ್ದಾರೆ ಅಥವಾ ಸೋಂಕಿಗೆ ಒಳಗಾದ ಭಾರತೀಯ ಮೂಲದ ಕುಟುಂಬದ ಬಗ್ಗೆ ಮಾಹಿತಿ ಹೊಂದಿದ್ದಾರೆ. ಕೆಲವೇ ಕೆಲವು ಮಂದಿ ಮಾತ್ರ ವಲಸೆ ಸಮಸ್ಯೆ ಎದುರಿಸಿದ್ದಾರೆ ಎಂದು ವರದಿ ಹೇಳಿದೆ.

ADVERTISEMENT

‘ಮಾಸ್ಕ್‌, ಆಹಾರ, ಔಷಧಗಳ ವಿತರಣೆ ಮಾಡಲು ಮತ್ತು ವಸತಿ ವ್ಯವಸ್ಥೆ ಕಲ್ಪಿಸಲು ಸಮುದಾಯದ ಹಲವು ಮಂದಿ ಸ್ಥಳೀಯರಿಗೆ ನೆರವಾಗಿರುವುದು ಕಂಡುಬಂದಿದೆ. ಕೌಟುಂಬಿಕ ಸಂಬಂಧಗಳಲ್ಲಿ ಯಾವುದೇ ಬದಲಾವಣೆ ಅಥವಾ ಸಕಾರಾತ್ಮಕ ಬದಲಾವಣೆ ಆಗಿಲ್ಲ ಎಂದು ಭಾರತೀಯ ಮೂಲದ ಆರರಲ್ಲಿ ಐದು ಮಂದಿ ಹೇಳಿದ್ದರೆ, ನಾಲ್ಕರಲ್ಲಿ ಒಬ್ಬರು, ಒತ್ತಡ ಹಾಗೂ ಹತಾಶೆಗೆ ಒಳಗಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ’ ಎಂದು ಎಫ್‌ಐಐಡಿಎಸ್‌ನ ನಿರ್ದೇಶಕ ಖಂಡೇರಾವ್‌ ಕಂಡ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.