ADVERTISEMENT

20 ಜನರ ಹತ್ಯೆ ಮಾಡಿದ ದರ್ಗಾ ಪಾಲಕ

ಪಿಟಿಐ
Published 2 ಏಪ್ರಿಲ್ 2017, 19:30 IST
Last Updated 2 ಏಪ್ರಿಲ್ 2017, 19:30 IST
ಪಂಜಾಬ್ ಪ್ರಾಂತ್ಯದ ಸರ್ಗೋಧಾ ಜಿಲ್ಲೆಯ ದರ್ಗಾದಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು –ರಾಯಿಟರ್ಸ್‌ ಚಿತ್ರ
ಪಂಜಾಬ್ ಪ್ರಾಂತ್ಯದ ಸರ್ಗೋಧಾ ಜಿಲ್ಲೆಯ ದರ್ಗಾದಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು –ರಾಯಿಟರ್ಸ್‌ ಚಿತ್ರ   

ಲಾಹೋರ್: ಒಂದೇ ಕುಟುಂಬದ ಆರು ಸದಸ್ಯರು ಸೇರಿದಂತೆ 20 ಮಂದಿ ಮೇಲೆ ಲಾಠಿ ಮತ್ತು ಚೂರಿಯಿಂದ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿರುವ ದಾರುಣ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗ್ರಾಮವೊಂದರಲ್ಲಿ ನಡೆದಿದೆ.

ಸರ್ಗೋಧಾ ಜಿಲ್ಲೆಯ ದರ್ಗಾವೊಂದರಲ್ಲಿ ಶನಿವಾರ ಮಧ್ಯರಾತ್ರಿ ಈ ಕೃತ್ಯ ಎಸಗಲಾಗಿದೆ ಎಂದು ಅಲ್ಲಿನ ಪೊಲೀಸ್‌ ಉಪ ಆಯುಕ್ತ ಲಿಯಾಖತ್ ಅಲಿ ಛಟ್ಟಾ ತಿಳಿಸಿದ್ದಾರೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ದರ್ಗಾದ ಪಾಲಕ ಅಬ್ದುಲ್ ವಹೀದ್ ಮತ್ತು ಆತನ ಸಹಚರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ADVERTISEMENT

ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದ ಸ್ಥಳೀಯ ಧಾರ್ಮಿಕ ಮುಖಂಡ ಅಲಿ ಮೊಹಮ್ಮದ್ ಗುಜ್ಜರ್ ಅವರ ಸ್ಮರಣಾರ್ಥ ದರ್ಗಾವನ್ನು ನಿರ್ಮಿಸಲಾಗಿತ್ತು. ಅದರ ಉಸ್ತುವಾರಿಯನ್ನು ಅಬ್ದುಲ್ ವಹೀದ್ ವಹಿಸಿಕೊಂಡಿದ್ದ.

`ಇಲ್ಲಿ ಭೇಟಿ ನೀಡಿದರೆ ಪಾಪಗಳನ್ನು ನಿವಾರಿಸಿಕೊಳ್ಳಬಹುದು ಎನ್ನುವ ನಂಬಿಕೆ ಭಕ್ತರದ್ದು.

ನಡೆದಿದ್ದೇನು?:  ಘಟನೆ ನಡೆದ ದಿನ ಭಕ್ತರಿಗೆ ದೂರವಾಣಿ ಕರೆ ಮಾಡಿ ದರ್ಗಾಕ್ಕೆ ಬರುವಂತೆ ವಹೀದ್‌ ಹೇಳಿದ್ದ. ದರ್ಗಾಕ್ಕೆ ಬಂದವರಿಗೆ ಅಮಲು ಪದಾರ್ಥ ನೀಡಿ, ನಂತರ ಅವರನ್ನು ವಿವಸ್ತ್ರಗೊಳಿಸಿ ಒಟ್ಟಿಗೆ ಕಟ್ಟಿಹಾಕಿ ಈ ಕೃತ್ಯ ಎಸಗಿದ್ದಾನೆ. ಈ ವೇಳೆ, ಇಬ್ಬರು ಮಹಿಳೆಯರು ಮತ್ತು ಪುರುಷರು ತಪ್ಪಿಸಿಕೊಂಡಿದ್ದು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಪ್ಪಿಸಿಕೊಂಡವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

‘ತನ್ನ ಧಾರ್ಮಿಕ ಮುಖಂಡ ಅಲಿ ಮುಹಮ್ಮದ್ ಅವರಿಗೆ ಎರಡು ವರ್ಷಗಳ ಹಿಂದೆ ವಿಷ ನೀಡಿ ಕೊಲೆ ಮಾಡಿದ್ದಕ್ಕೆ ಇವರನ್ನು ಹತ್ಯೆ ಮಾಡಿದ್ದೇನೆ. ತಾನವರನ್ನು ಕೊಲ್ಲದಿದ್ದರೆ ಅವರು ನನಗೂ ವಿಷ ನೀಡುತ್ತಿದ್ದರು’ ಎಂದು ವಹೀದ್ ಹೇಳಿರುವುದಾಗಿ ಛಟ್ಟಾ ತಿಳಿಸಿದ್ದಾರೆ.

‘ಘಟನೆಯಲ್ಲಿ ಇನ್ನೂ ಹಲವರ ಕೈವಾಡ ಇರುವ ಬಗ್ಗೆ ಶಂಕಿಸಲಾಗಿದೆ. ಪ್ರಮುಖ ಶಂಕಿತ ಲಾಹೋರ್‌ನ ನಿವಾಸಿಯಾಗಿದ್ದು, ಪಾಕಿಸ್ತಾನದ ಚುನಾವಣಾ ಆಯೋಗದ ಉದ್ಯೋಗಿ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಐವರನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದ್ದಾರೆ.

ಘಟನೆ ಬಗ್ಗೆ 24 ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆ ಪೊಲೀಸ್ ಮಹಾನಿರೀಕ್ಷಕರಿಗೆ ಪಂಜಾಬ್ ಮುಖ್ಯಮಂತ್ರಿ ಶೆಹ್‌ಬಾಜ್ ಷರೀಫ್ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.