ADVERTISEMENT

ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ: 20 ಟ್ರಿಲಿಯನ್ ಡಾಲರ್ ದಾವೆ ಹೂಡಿದ ಅಮೆರಿಕ

ಏಜೆನ್ಸೀಸ್
Published 25 ಮಾರ್ಚ್ 2020, 7:36 IST
Last Updated 25 ಮಾರ್ಚ್ 2020, 7:36 IST
   

ನವದೆಹಲಿ: ಜಗತ್ತಿನಾದ್ಯಂತ ಸುಮಾರು 17 ಸಾವಿರಕ್ಕೂ ಹೆಚ್ಚು ಜನರನ್ನು ಬಲಿಪಡೆದಿರುವ ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ ಎಂದು ಆರೋಪಿಸಿ ಅಮೆರಿಕದಲ್ಲಿ 20 ಟ್ರಿಲಿಯನ್‌ ಯುಎಸ್ ಡಾಲರ್‌ (ಅಂದಾಜು ಒಂದು ಲಕ್ಷದ 52 ಸಾವಿರಕೋಟಿ ರೂಪಾಯಿ) ಮೊಕದ್ದಮೆ ಹೂಡಲಾಗಿದೆ.

ಅಮೆರಿಕದ ವಕೀಲ ಲ್ಯಾರಿಲೇಯ್ಮನ್‌ ಹಾಗೂ ಅವರ ತಂಡ ಚೀನಾ ಸರ್ಕಾರ, ಚೀನಾ ಸೇನೆ ಮತ್ತು ಅದರ ಮುಖ್ಯಸ್ಥ ಚೆನ್‌ ವೆಯ್‌, ವುಹಾನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವೈರಾಲಜಿ ಮತ್ತು ಅದರ ನಿರ್ದೇಶಕ ಶಿ ಝೆಂಗ್ಲಿವಿರುದ್ಧ ದೂರು ದಾಖಲಿಸಿದೆ.

ಚೀನಾದಲ್ಲಿ ತಯಾರಿಸಲಾದ ಜೈವಿಕ ಅಸ್ತ್ರವೇ ಕೊರೊನಾ ವೈರಸ್‌ ಎಂದು ಆರೋಪಿಸಿರುವ ‌ದೂರುದಾರರು ಬೇಡಿಕೆ ಇಟ್ಟಿರುವ ಪರಿಹಾರ ಮೊತ್ತ ಚೀನಾದ ಜಿಡಿಪಿಗಿಂತಲೂ ಹೆಚ್ಚಿನದ್ದಾಗಿದೆ.ಸಾವಿರಾರು ಜನರ ಸಾವಿಗೆ ಕಾರಣವಾದದ್ದೂ ಸೇರಿದಂತೆ, ಭಯೋತ್ಪಾದನೆಗೆ ಬೆಂಬಲ,ಶಸ್ತ್ರಾಸ್ತ್ರ ರವಾನೆ, ಅಮೆರಿಕ ನಾಗರಿಕರ ಸಾವಿಗೆ ಪಿತೂರಿ, ಜನರ ಮೇಲಿನ ಹಲ್ಲೆ ಹಾಗೂ ಬೇಜವಾಬ್ದಾರಿತನದ ಆರೋಪಗಳನ್ನೂ ಮಾಡಲಾಗಿದೆ.

ADVERTISEMENT

ಜನರನ್ನು ಸಾಮೂಹಿಕವಾಗಿ ಕೊಲ್ಲುವ ಸಲುವಾಗಿಯೇ ಕೋವಿಡ್‌–19 ವಿನ್ಯಾಸಗೊಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ದೂರುದಾರರು, ವುಹಾನ್‌ ವೈರಾಲಜಿ ಸಂಸ್ಥೆಯಿಂದಲೇ ಕೊರೊನಾ ವೈರಸ್‌ ಸೋರಿಕೆಯಾಗಿದೆ ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದಾರೆ. ಜೈವಿಕ ಶಸ್ತ್ರಾಸ್ತ್ರಗಳಿಗೆ 1925ರಲ್ಲಿಯೇ ನಿಷೇಧ ಹೇರಲಾಗಿದೆ. ಹಾಗಾಗಿ ಅಂತಹವುಗಳನ್ನು ಬಳಸುವುದು ಸಾಮೂಹಿಕ ವಿನಾಶಕ್ಕಾಗಿನ ಭಯೋತ್ಪಾದಕ ಕೃತ್ಯವೆಂದುಉಲ್ಲೇಖಿಸಲಾಗಿದೆ.

ಚೀನಾದ ವುಹಾನ್‌ನಲ್ಲಿ ಏಕೈಕ ಮೈಕ್ರೋಬಯಾಲಜಿ ಪ್ರಯೋಗಾಲಯ ಇದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಅಲ್ಲಿ ಕೊರೊನಾ ವೈರಸ್‌ ಮಾದರಿಯ ಸುಧಾರಿತ ವೈರಸ್‌ಗಳನ್ನು ಸೃಷ್ಟಿಸಲಾಗುತ್ತದೆ. ಚೀನಾ ಇದನ್ನು ಬಚ್ಚಿಡಲು ಕೊರೊನಾ ವೈರಸ್‌ ಸಂಬಂಧಿಸಿದ ಮಾಹಿತಿಯನ್ನು ರಾಷ್ಟ್ರೀಯ ಭದ್ರತಾ ವಿಚಾರದೊಂದಿಗೆ ಸಮೀಕರಿಸುತ್ತಿದೆ ಎಂದು ವಕೀಲರ ತಂಡ ಹೇಳಿದೆ.

ಈ ಬಗ್ಗೆಮಾತನಾಡಿರುವ ಲೇಯ್ಮನ್‌ ಹಾಗೂ ಆತನ ತಂಡ, ‘ಕೊರೊನಾ ವೈರಸ್‌ ಕುರಿತು ಜಗತ್ತಿಗೆ ಎಚ್ಚರಿಕೆಯ ಸಂದೇಶ ಸಾರಿದ್ದ ಚೀನಾದ ವೈದ್ಯರು ಮತ್ತು ಸಂಶೋಧಕರು ಇದೀಗ ಮೌನವಾಗಿದ್ದಾರೆ. ನಿಧಾನವಾಗಿ ಕಾರ್ಯಾಚರಿಸುವ ಮತ್ತು ನಿಧಾನವಾಗಿ ಹರಡುವ ಈ ವೈರಸ್‌ ಅನ್ನು ಅಮೆರಿಕದ ಮಿಲಿಟರಿ ವಿರುದ್ಧ ಬಳಸಲಾಗುತ್ತಿದೆ. ಅಮೆರಿಕದಂತೆ ಚೀನಾದ ವೈರಿ ದೇಶಗಳ ವಿರುದ್ಧ ಬಳಸಲು ಇದನ್ನು ವಿನ್ಯಾಸಗೊಳಿಸಲಾಗಿದೆ’ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.