ನ್ಯೂಯಾರ್ಕ್(ಪಿಟಿಐ): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೊಭ್ರಗಡೆ ವಿರುದ್ಧ ಇಲ್ಲಿನ ಮ್ಯಾನ್ಹಟನ್ನಲ್ಲಿರುವ ಭಾರತ ಮೂಲದ ಅಮೆರಿಕದ ಅಟಾರ್ನಿ ಪ್ರೀತ್ ಭರಾರ, 21 ಪುಟಗಳ ಹೊಸ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಇದರ ಆಧಾರದಲ್ಲಿ ದೇವಯಾನಿ ವಿರುದ್ಧ ವೀಸಾ ವಂಚನೆ ಮತ್ತು ತಪ್ಪು ಮಾಹಿತಿ ಕುರಿತಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಜಿಲ್ಲಾ ನ್ಯಾಯಾಧೀಶ ವಿಲಿಯಂ ಪಾಲ್ ಅವರಿಗೆ ಬರೆದ ಪತ್ರದಲ್ಲಿ, ‘ದೇವಯಾನಿ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದ್ದು ಬಂಧಿಸಿದ ತಕ್ಷಣ ನ್ಯಾಯಾಲಯಕ್ಕೆ ತಿಳಿಸಲಾಗುವುದು’ ಎಂದು ತಿಳಿಸಿದ್ದಾರೆ.
ಆದರೆ, ದೇವಯಾನಿ ಸದ್ಯಕ್ಕೆ ವಿಚಾರಣೆಗೆ ಲಭ್ಯವಿಲ್ಲ. ಆಕೆ ಎಲ್ಲಿರುವರೆಂದು ಗೊತ್ತಿದ್ದರೂ ನ್ಯಾಯಾಲಯದ ಎದುರು ಹಾಜರುಪಡಿಸಲು ಸಾಧ್ಯವಿಲ್ಲ. ಆಕೆ ವಿಚಾರಣೆಗೆ ಹಾಜರಾಗಲು ಇಲ್ಲಿಗೆ ಮರಳಿ ಬರಲು ನಿರಾಕರಿಸಬಹುದು ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮಗಳನ್ನು ಶಾಲೆಗೆ ಕಳಿಸಿ ಮರಳಿ ಬರುವಾಗ ಅಮೆರಿಕ ಪೊಲೀಸರು ನಡುರಸ್ತೆಯಲ್ಲಿಯೇ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರಿಗೆ ಕೈಕೋಳ ತೊಡಿಸಿ ಬಂಧಿಸಿ ಕರೆದೊಯ್ದಿದ್ದರು. ಈ ಘಟನೆ ಅಮೆರಿಕ ಮತ್ತು ಭಾರತ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ದೋಷಾರೋಪದಲ್ಲಿ ಹೊಸದೇನಿದೆ?
ಮನೆಕೆಲಸದ ಸಹಾಯಕಿ ಸಂಗೀತಾ ರಿಚರ್ಡ್ಸ್ ಅವರ ವೀಸಾ ಪಡೆಯಲು ದೇವಯಾನಿ ಉದ್ದೇಶಪೂರ್ವಕವಾಗಿ ಅಮೆರಿಕ ಅಧಿಕಾರಿಗಳಿಗೆ ಅನೇಕ ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸಿದ್ದಾರೆ ಎಂದು ಹೊಸ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಅಮೆರಿಕದ ಕಾನೂನಿನ ಅನ್ವಯ ಮನೆಗೆಲಸದ ಸಹಾಯಕಿಗೆ ನೀಡಬೇಕಿದ್ದ ಸಂಬಳ ನೀಡದೆ ಶೋಷಿಸಿದ್ದಾರೆ. ಆಕೆಗೆ ನೀಡುವ ಕಡಿಮೆ ಸಂಬಳದ ಬಗ್ಗೆ ತಿಳಿಸಿದರೆ ವೀಸಾ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ದೇವಯಾನಿ ಉದ್ದೇಶಪೂರ್ವಕವಾಗಿ ಸತ್ಯ ಮರೆಮಾಚಿದ್ದರು ಎಂದು ಆರೋಪಿಸಲಾಗಿದೆ.
‘ಸಂಗೀತಾ ಪಾಸ್‌ಪೋರ್ಟ್‌ನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ ದೇವಯಾನಿ, ಮೂರು ವರ್ಷದ ಗುತ್ತಿಗೆ ಅವಧಿ ಮುಗಿದ ನಂತರ ಹಿಂತಿರುಗಿಸುವುದಾಗಿ ಹೇಳಿದ್ದರು. ಭಾರತದ ಅಧಿಕಾರಿಗಳು ಮತ್ತು ನ್ಯಾಯಾಲಯದ ನೆರವಿನಿಂದ ಸಂಗೀತಾ ಅವರ ಬಾಯಿ ಮುಚ್ಚಿಸಲು ಅವರು ಯತ್ನಿಸಿದ್ದರು’ ಎಂದು ದೂರಲಾಗಿದೆ..
ದೇವಯಾನಿ ಮತ್ತು ಸಂಗೀತಾ ನಡುವಿನ ಕರಾರುಪತ್ರ ಹಾಗೂ ಭಾರತದಲ್ಲಿ ಸಂಗೀತಾ ವಿರುದ್ಧ ದಾಖಲಾದ ಎಫ್ಐಆರ್ ಪ್ರತಿಯನ್ನೂ ಭರಾರ ಆರೋಪಪಟ್ಟಿಯ ಜತೆ ಲಗತ್ತಿಸಿದ್ದಾರೆ. ಅದರಲ್ಲಿ ಮನೆಕೆಲಸದ ಸಹಾಯಕಿಗೆ ಪ್ರತಿ ತಿಂಗಳು 30 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಕರಾರಿನ ಅನ್ವಯ ಪ್ರತಿ ತಿಂಗಳು ಅವರು 2,70 ಲಕ್ಷ ರೂಪಾಯಿ ಸಂಬಳ ನೀಡಬೇಕಿತ್ತು. ಅಸಲಿ ಕರಾರುಪತ್ರ ಅಮೆರಿಕದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತೆ ಎಂಬ ಅರಿವಿದ್ದ ದೇವಯಾನಿ ನಕಲಿ ಕರಾರುಪತ್ರ ಸೃಷ್ಟಿಸಿದ್ದರು ಎಂದು ಭರಾರ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.