ADVERTISEMENT

‘ಬ್ರಿಟನ್‌ನಿಂದ ಬಂದ 26 ಮಂದಿಯಲ್ಲಿ ಕೋವಿಡ್ ಸೋಂಕು ದೃಢ‘

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 5:22 IST
Last Updated 28 ಡಿಸೆಂಬರ್ 2020, 5:22 IST
   

ಬೆಂಗಳೂರು: ‘ಬ್ರಿಟನ್‌ನಿಂದ ರಾಜ್ಯಕ್ಕೆ ಬಂದ 1,614 ಜನರನ್ನು ಈವರೆಗೆ ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 26 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ನಿಮ್ಹಾನ್ಸ್‌ನಲ್ಲಿ ನಡೆದ ತಪಾಸಣೆಯ ಮಾಹಿತಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮತನಾಡಿದ ಅವರು, ‘ಸೋಂಕು ಪತ್ತೆ ಆದ ಎಲ್ಲರಿಗೂ ಸರ್ಕಾರದ ಸುಪರ್ದಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಯಾವೇ ಥರದ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ. ಯಾರೂ ಹೋಮ್‌ ಐಸೋಲೈಷನ್‌ನಲ್ಲಿ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

‘ವಿದೇಶದಿಂದ ಬಂದವರ ಪೈಕಿ ಅನೇಕರು ಇನ್ನೂ ಪತ್ತೆ ಆಗಿಲ್ಲ. ಅದರಲ್ಲೂ ಬ್ರಿಟನ್‌ನಿಂದ ಬಂದವರಿದ್ದಾರೆ. ಅನೇಕರು ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡುವ ಕೆಲಸ ಮುಂದುವರಿದೆ’ ಎಂದರು.

ADVERTISEMENT

‘ತಪಾಸಣೆಗೆ ಒಳಗಾಗದೆ ಓಡಾಡುವವರು ಸರ್ಕಾರದ ಜೊತೆ ಸಹಕರಿಸಬೇಕು. ಅದು ಅವರ ಜವಾಬ್ದಾರಿ. ತಲೆಮರೆಸಿಕೊಂಡು ಓಡಾಡುವುದು ಕೂಡಾ ಅಪರಾಧ. ಇಂದು ಸಚಿವ ಸಂಪುಟ ಸಭೆ ಇದೆ. ಸಭೆಯ ಬಳಿಕ ತಲೆಮರೆಸಿಕೊಂಡವರ ಪತ್ತೆ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ಮಾಡುತ್ತೇನೆ’ ಎಂದರು.

ರೂಪಾಂತರಿ ವೈರಸ್‌– ಐಸಿಎಂಆರ್‌ನಿಂದ ಇಂದು ವರದಿ ನಿರೀಕ್ಷೆ:ಬ್ರಿಟನ್‌ನಿಂದ ಬಂದವರ ತಪಾಸಣೆ ವರದಿ ಬರಲು ವಿಳಂಬ ಆಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ವರದಿ ಬರಲು ಕನಿಷ್ಠ 48 ಗಂಟೆ ಬೇಕಾಗಿದೆ. ನಿಮ್ಹಾನ್ಸ್‌ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೈಹಿಸಿಕೊಡಲಾಗಿದೆ. ಇಡೀ ದೇಶದ ಎಲ್ಲ ರಾಜ್ಯಗಳಿಂದ ಬಂದ ವರದಿಯನ್ನು ಪರಿಶೀಲಿಸಿ, ಐಸಿಎಂಆರ್‌ನಿಂದ ವರದಿ ನೀಡುತ್ತಾರೆ. ದೆಹಲಿಯಿಂದ ಐಸಿಎಂಆರ್‌ ವರದಿ ಇಂದು ಪ್ರಕಟ ಆಗುವ ನಿರೀಕ್ಷೆ ಇದೆ. ನಾನು ಕೂಡಾ ಐಸಿಎಂಆರ್‌ ಜೊತೆ ಮಾತನಾಡುತ್ತೇನೆ’ ಎಂದರು.

ಶಾಲೆಗಳ‌ ಪುನರಾರಂಭದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಈ ವಿಚಾರದಲ್ಲಿ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ. ಆದರೂ ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.