ADVERTISEMENT

ಉಕ್ಕು ಸ್ಥಾವರದಲ್ಲಿ ಸಿಕ್ಕಿಬಿದ್ದಿದ್ದ ಉಕ್ರೇನ್‌ನ 260 ಯೋಧರ ರಕ್ಷಣೆ

ಅಜೋವ್‌ಸ್ಟಾಲ್‌ ಉಕ್ಕು ಸ್ಥಾವರದಲ್ಲಿ ಸಿಕ್ಕಿಬಿದ್ದಿದ್ದ ಯೋಧರು * ಶರಣಾಗತರಾಗಿದ್ದಾರೆ –ರಷ್ಯಾ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 19:48 IST
Last Updated 17 ಮೇ 2022, 19:48 IST
ರಷ್ಯಾ ವಶಪಡಿಸಿಕೊಂಡ ಉಕ್ರೇನ್‌ನ ಅಜೊವೊಸ್ಟಾಲ್‌ ಉಕ್ಕು ಸ್ಥಾವರದಿಂದ ರಕ್ಷಿಸಲಾದ ಉಕ್ರೇನ್ ಯೋಧರನ್ನು ಕರೆದೊಯ್ಯುತ್ತಿರುವ ಚಿತ್ರವನ್ನು ರಷ್ಯಾದ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ
ರಷ್ಯಾ ವಶಪಡಿಸಿಕೊಂಡ ಉಕ್ರೇನ್‌ನ ಅಜೊವೊಸ್ಟಾಲ್‌ ಉಕ್ಕು ಸ್ಥಾವರದಿಂದ ರಕ್ಷಿಸಲಾದ ಉಕ್ರೇನ್ ಯೋಧರನ್ನು ಕರೆದೊಯ್ಯುತ್ತಿರುವ ಚಿತ್ರವನ್ನು ರಷ್ಯಾದ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ   

ಕೀವ್‌: ಉಕ್ರೇನ್‌ನ ಮರಿಯುಪೋಲ್‌ ನಗರದಲ್ಲಿ ರಷ್ಯಾ ವಶಕ್ಕೆ ಪಡೆದಿದ್ದ ಅಜೋವ್‌ಸ್ಟಾಲ್ ಉಕ್ಕು ಸ್ಥಾವರದಲ್ಲಿ ಸಿಕ್ಕಿಬಿದ್ದಿದ್ದ 260ಕ್ಕೂ ಹೆಚ್ಚು ಯೋಧರನ್ನು ರಕ್ಷಿಸಲಾಗಿದೆ ಎಂದು ಉಕ್ರೇನ್‌ ತಿಳಿಸಿದೆ.

ಈ ಪೈಕಿ 53 ಯೋಧರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ನೊವೊಜೊವಸ್ಕ್‌ಗೆ ವೈದ್ಯಕೀಯ ಚಿಕಿತ್ಸೆಗಾಗಿ ಕರೆತರಲಾಗಿದೆ ಎಂದು ಉಕ್ರೇನ್‌ನ ಉಪ ರಕ್ಷಣಾ ಸಚಿವ ಗನ್ನಾ ಮಲ್ಯಾರ್‌ ತಿಳಿಸಿದ್ದಾರೆ. ಈ ಮಧ್ಯೆ, ‘265 ಯೋಧರು ಶರಣಾಗಿದ್ದಾರೆ’ ಎಂದು ರಷ್ಯಾ ಪ್ರಕಟಿಸಿದೆ.

ಉಳಿದ 211 ಜನ ಯೋಧರನ್ನು ಒಲೆನಿವ್ಕಾಗೆ ಮಾನವೀಯ ಕಾರಿಡಾರ್ ಮೂಲಕ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.ನೊವೊಜೊವಸ್ಕ್‌ ಮತ್ತು ಒಲೆನಿವ್ಕಾ ಎರಡೂ ನಗರಗಳು ಪ್ರಸ್ತುತ ರಷ್ಯಾ ಬೆಂಬಲಿತ ಪ್ರತ್ಯೇಕತಾ ಬಣದ ನಿಯಂತ್ರಣದಲ್ಲಿಯೇ ಇವೆ.

ADVERTISEMENT

‘ನಮ್ಮ ಯೋಧರನ್ನು ರಕ್ಷಿಸುವ ಭರವಸೆ ಇದೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ. ‘ಉಕ್ರೇನ್ ಯೋಧರು ಜೀವಂತವಾಗಿ ಬರಬೇಕು. ಇದು ನಮ್ಮ ನಿಲುವು’ ಎಂದು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ರಷ್ಯಾ ಹೇಳಿಕೆ: ಮರಿಯುಪೋಲ್‌ನ ಅಜೋವ್‌ಸ್ಟಾಲ್ ಉಕ್ಕುಸ್ಥಾವರದಲ್ಲಿ ಬೀಡುಬಿಟ್ಟಿದ್ದ ಉಕ್ರೇನ್‌ನ 265 ಯೋಧರು ಶರಣಾಗತರಾಗಿದ್ದಾರೆ ಎಂದು ರಷ್ಯಾ ಹೇಳಿದೆ. ಬಂದರು ನಗರವನ್ನು ಕಳೆದ ತಿಂಗಳು ರಷ್ಯಾ ಸೇನೆ ಸುತ್ತುವರಿದಿದಿತ್ತು. ಈ ಬೆಳವಣಿಗೆಯ ಹಿಂದೆಯೇ ಉಕ್ರೇನ್‌ನ ಹಲವು ಯೋಧರು ಅಜೋವ್‌ಸ್ಟಾಲ್‌ ಕೈಗಾರಿಕಾ ವಲಯದ ಸುರಂಗ ಮಾರ್ಗಗಳಲ್ಲಿ ಆಶ್ರಯ ಪಡೆದಿದ್ದರು ಎಂದು ತಿಳಿಸಿದೆ.

ಶೆಲ್‌ ದಾಳಿ: ಉಕ್ರೇನ್‌ನ ಹಾರ್ಕಿವ್‌ ನಗರದ ವಿವಿಧೆಡೆ ರಷ್ಯಾದ ಶೆಲ್‌ ದಾಳಿ ಮಂದುವರಿದಿದೆ.

ನ್ಯಾಟೊ: ಸ್ವೀಡನ್‌, ಫಿನ್ಲೆಂಡ್‌ ಇಂದು ಅರ್ಜಿ

ಸ್ಟಾಕ್‌ಹೋಮ್: ‘ನ್ಯಾಟೊ ಸದಸ್ಯತ್ವ ಪಡೆಯುವುದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸ್ವೀಡನ್ ಹಾಗೂ ಫಿನ್ಲೆಂಡ್‌ ಬುಧವಾರ ಸಲ್ಲಿಸಲಿವೆ’ ಎಂದು ಸ್ವೀಡನ್‌ ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ ಮಂಗಳವಾರ ಹೇಳಿದ್ದಾರೆ.

ಫಿನ್ಲೆಂಡ್‌ ಅಧ್ಯಕ್ಷ ಸೌಲಿ ನಿನಿಸ್ಟೊ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದಸ್ಯತ್ವಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಎರಡೂ ದೇಶಗಳು ಒಟ್ಟಾಗಿ ಪೂರ್ಣಗೊಳಿಲಿವೆ’ ಎಂದರು.

ಬ್ರಿಟನ್ ಬೆಂಬಲ: ಫಿನ್ಲೆಂಡ್‌, ಸ್ವೀಡನ್ ದೇಶಗಳು ನ್ಯಾಟೊ ಸದಸ್ಯತ್ವ ಪಡೆಯುವ ಪ್ರಸ್ತಾವಕ್ಕೆ ಬ್ರಿಟನ್‌ ಬೆಂಬಲಿಸಿದೆ.

ಹೊರ ನಡೆದ ರಷ್ಯಾ

ಮಾಸ್ಕೊ (ಎಎಫ್‌ಪಿ): ಬಾಲ್ಟಿಕ್‌ ಸಾಗರ ರಾಷ್ಟ್ರಗಳ ಮಂಡಳಿಯನ್ನು (ಸಿಬಿಎಸ್‌ಎಸ್‌) ತೊರೆಯುತ್ತಿರುವು
ದಾಗಿ ರಷ್ಯಾ ಮಂಗಳವಾರ ಹೇಳಿದೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ ಪಶ್ಚಿಮ ರಾಷ್ಟ್ರಗಳೊಂದಿಗಿನ ಅದರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ, ರಷ್ಯಾದಿಂದ ಈ ನಿರ್ಧಾರ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.