ಸಾವು
(ಪ್ರಾತಿನಿಧಿಕ ಚಿತ್ರ)
ಇಸ್ಲಾಮಾಬಾದ್: ಪಾಕಿಸ್ತಾನದ ಗಡಿಭಾಗಕ್ಕೆ ಹೊಂದಿಕೊಂಡಿರುವ ಸಿಸ್ತಾನ್– ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಇರಾನ್‌ನ ಗಡಿಭದ್ರತಾ ಪಡೆಯ ಮೂವರು ಯೋಧರು ಮೃತಪಟ್ಟಿದ್ದಾರೆ.
‘ಇರಾನ್, ಪಾಕಿಸ್ತಾನದ ಗಡಿಭಾಗದಲ್ಲಿ ವಿವಿಧ ಉಗ್ರಗಾಮಿ ಸಂಘಟನೆಗಳು ಆಗಾಗ್ಗೆ ದಾಳಿ ನಡೆಸುತ್ತಿವೆ. ಪರುದ್, ಖಾಶ್, ಹಿರ್ಮಾಂಡ್ ಹಾಗೂ ಡೊಮಾಕ್ ಪ್ರಾಂತ್ಯದಲ್ಲಿ ಕಳೆದ ನಾಲ್ಕು ರಾತ್ರಿ ನಿರಂತರ ದಾಳಿ ನಡೆಸಿದ್ದು, ಮೂವರು ಯೋಧರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ’ ಎಂದು ಇರಾನ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುನ್ನಿ ಬಹುಸಂಖ್ಯಾತ ಗುಂಪಾದ ‘ಜೈಶ್–ಉಲ್–ಅದ್ಲ್’ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿದೆ. 2012ರಲ್ಲಿ ಈ ಗುಂಪು ತಲೆಯೆತ್ತಿದ್ದು, ಬಲೂಚಿಸ್ತಾನದ ಮತ್ತೊಂದು ಉಗ್ರಗಾಮಿ ಸಂಘಟನೆ ‘ಜುನ್‌ದುಲ್ಲಾ’ ಕೂಡ ಈ ಭಾಗದಲ್ಲಿ ಸಕ್ರಿಯವಾಗಿದೆ.
ದಾಳಿ ನಡೆಸಿರುವ ‘ಜೈಶ್–ಉಲ್–ಅದ್ಲ್’ ಸಂಘಟನೆಯು ಪಾಕಿಸ್ತಾನದಲ್ಲಿ ನೆಲೆ ಹೊಂದಿದೆ ಎಂದು ಇರಾನ್ ಸರ್ಕಾರ ತಿಳಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಪಾಕಿಸ್ತಾನ, ತಾನು ಕೂಡ ಭಯೋತ್ಪಾದನಾ ದಾಳಿಯ ಸಂತ್ರಸ್ತನಾಗಿದ್ದು, ತನ್ನ ನೆಲದಿಂದ ಭಯೋತ್ಪಾದನೆಯನ್ನು ಹೊಡೆದೋಡಿಸಲು ನಿರಂತರ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.