ADVERTISEMENT

ಕೀನ್ಯಾ–ಸೊಮಾಲಿಯಾದಲ್ಲಿ ಭಾರಿ ಮಳೆ: ಹಠಾತ್ ಪ್ರವಾಹ– 30ಕ್ಕೂ ಅಧಿಕ ಮಂದಿ ಸಾವು

ಪಿಟಿಐ
Published 7 ನವೆಂಬರ್ 2023, 2:31 IST
Last Updated 7 ನವೆಂಬರ್ 2023, 2:31 IST
<div class="paragraphs"><p>ಕೆನ್ಯಾ ರೆಡ್ ಕ್ರಾಸ್ ಘಟಕದ ಟ್ವಿಟರ್ ಚಿತ್ರ</p></div>

ಕೆನ್ಯಾ ರೆಡ್ ಕ್ರಾಸ್ ಘಟಕದ ಟ್ವಿಟರ್ ಚಿತ್ರ

   

ನೈರೋಬಿ: ಕೀನ್ಯಾ ಮತ್ತು ಸೊಮಾಲಿಯಾ ದೇಶಗಳಲ್ಲಿ ಭಾರಿ ಮಳೆ ಮತ್ತು ದಿಢೀರ್ ಪ್ರವಾಹದಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹತ್ತಾರು ಸಾವಿರ ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ಪರಿಹಾರ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳು ತಿಳಿಸಿವೆ.

ಸೊಮಾಲಿಯಾದಲ್ಲಿ ಭಾರೀ ಮಳೆ ಪರಿಣಾಮ 14 ಮಂದಿ ಮೃತಪಟ್ಟ ಬಳಿಕ ಅಲ್ಲಿನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಪ್ರವಾಹದಿಂದಾಗಿ ಹಲವು ಮನೆಗಳು, ರಸ್ತೆಗಳು ಮತ್ತು ಸೇತುವೆಗಳು ಹಾಳಾಗಿವೆ. ಲೂಕ್ ಜಿಲ್ಲೆಯಲ್ಲಿ ‍2,400 ನಿವಾಸಿಗಳು ಪ್ರವಾಹದಲ್ಲಿ ಸಿಲುಕಿದ್ದು, ತುರ್ತು ಮತ್ತು ರಕ್ಷಣಾ ಕಾರ್ಯಾಚರಣೆ ತಂಡಗಳು ಅವರನ್ನು ತಲುಪಲು ಪ್ರಯತ್ನಿಸುತ್ತಿವೆ.

ADVERTISEMENT

ಜುಬಾ ಮತ್ತು ಶಾಬೆಲ್ಲೆ ನದಿಗಳ ಉದ್ದಕ್ಕೂ ಪ್ರವಾಹದ ಹೆಚ್ಚಿನ ಅಪಾಯದ ಬಗ್ಗೆ ವಿಶ್ವಸಂಸ್ಥೆಯ ಕಚೇರಿ ಎಚ್ಚರಿಸಿದೆ. ಜುಬಾ ನಟಿ ತಟದಲ್ಲಿ ವಾಸಿಸುತ್ತಿರುವ ಜನರನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಕರೆ ನೀಡಿದೆ.

ಸತತ ನಾಲ್ಕು ವರ್ಷಗಳ ಬರಗಾಲದ ನಂತರ ಸೊಮಾಲಿಯಾದಲ್ಲಿ ಭೀಕರ ಪ್ರವಾಹ ಮತ್ತೆ ಜನರನ್ನು ಸಂಕಷ್ಟಕ್ಕೆ ದೂಡಿದೆ.

ನೆರೆಯ ಕೀನ್ಯಾದಲ್ಲಿ, ಶುಕ್ರವಾರ ಆರಂಭವಾದ ಭಾರೀ ಮಳೆಯಿಂದ ಸಾವಿನ ಸಂಖ್ಯೆ 15ಕ್ಕೆ ಏರಿದೆ ಎಂದು ಕೀನ್ಯಾದ ರೆಡ್‌ಕ್ರಾಸ್ ಘಟಕ ಹೇಳಿದೆ. ಬಂದರು ನಗರ ಮೊಂಬಾಸಾ ಮತ್ತು ಈಶಾನ್ಯ ಕೌಂಟಿಗಳಾದ ಮಂಡೆರಾ ಮತ್ತು ವಾಜಿರ್‌ಗಳಲ್ಲಿ ಹೆಚ್ಚು ಪರಿಣಾಮ ಬೀರಿದೆ.

ಹಠಾತ್ ಪ್ರವಾಹದಲ್ಲಿ 241 ಎಕರೆ ಕೃಷಿ ಭೂಮಿ ನಾಶವಾಗಿದ್ದು, 1,067 ಜಾನುವಾರು ಸಾವಿಗೀಡಾಗಿವೆ ಎಂದು ರೆಡ್ ಕ್ರಾಸ್ ಸಂಸ್ಥೆ ವರದಿ ಮಾಡಿದೆ.

ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ಸಣ್ಣ ಮಳೆಗಾಲದ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯ ಮಳೆಗಿಂತ ಹೆಚ್ಚು ಮಳೆ ಸುರಿಸಲಿಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿತ್ತು. ಮುನ್ಸೂಚನೆಯನ್ನು ಅಧ್ಯಕ್ಷ ವಿಲಿಯಂ ರುಟೊ ವಿರೋಧಿಸಿದ್ದರಿಂದ ತಜ್ಞರು ತಮ್ಮ ವರದಿಯನ್ನು ಪರಿಷ್ಕರಿಸಿ ಯಾವುದೇ ವಿನಾಶಕಾರಿ ಪ್ರವಾಹ ಇರುವುದಿಲ್ಲ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.