ADVERTISEMENT

America Presidential Election: ಕಮಲಾ ಪರ ಹೆಚ್ಚುತ್ತಿರುವ ಜನಬೆಂಬಲ

ಪಿಟಿಐ
Published 30 ಜುಲೈ 2024, 14:43 IST
Last Updated 30 ಜುಲೈ 2024, 14:43 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಕ್ರಾಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಪ್ರಚಾರಕ್ಕೆ 3.6 ಲಕ್ಷ ಜನರು ಸ್ವಪ್ರೇರಿತರಾಗಿ ಮುಂದೆ ಬಂದಿದ್ದಾರೆ.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಸ್ಪರ್ಧೆಯಲ್ಲಿ ಕಮಲಾ ಪರವಾಗಿ ತಳಮಟ್ಟದಲ್ಲಿ ಬೆಂಬಲ ಬಲಗೊಳ್ಳುತ್ತಿದೆ ಎಂಬುದನ್ನು ಇದು ಬಿಂಬಿಸುತ್ತಿದೆ.

ಅಧ್ಯಕ್ಷ ಜೋ ಬೈಡನ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕಮಲಾ ಅಧಿಕೃತವಾಗಿ ತಾನು ಆಕಾಂಕ್ಷಿ ಎಂದು ಪ್ರಕಟಿಸಿದ್ದರು. ಇವರ ಅಭ್ಯರ್ಥಿತನವನ್ನು ಪಕ್ಷ ಅಧಿಕೃತವಾಗಿ ಘೋಷಿಸಬೇಕಿದೆ.

ADVERTISEMENT

‘ಕಮಲಾ ಹ್ಯಾರಿಸ್ ಪರ ಮೊದಲ ವಾರದಲ್ಲಿ 200 ಮಿಲಿಯನ್ ಡಾಲರ್ ನಿಧಿ ಸಂಗ್ರಹವಾಗಿದ್ದು, 17 ಸಾವಿರ ಕಾರ್ಯಕರ್ತರು ಸ್ವಪ್ರೇರಣೆಯಿಂದ ಪ್ರಚಾರಕ್ಕೆ ಮುಂದಾಗಿದ್ದರು. ಈಗ ಕಾರ್ಯಕರ್ತರ ಸಂಖ್ಯೆ 3.6 ಲಕ್ಷಕ್ಕೆ ಏರಿದೆ’ ಎಂದು ಪ್ರಚಾರ ಕಾರ್ಯದ ಮುಂಚೂಣಿಯಲ್ಲಿರುವ ಡ್ಯಾನ್ ಕನ್ನಿನೆನ್ ಹೇಳಿದರು.

‘ಹ್ಯಾರಿಸ್‌ ಫಾರ್ ಪ್ರೆಸಿಡೆಂಟ್‌’ ಅಭಿಯಾನ ಬರುವ ದಿನಗಳಲ್ಲಿ ಇನ್ನಷ್ಟು ಚುರುಕು ಪಡೆಯಲಿದೆ. ಗೆಲುವಿಗೆ ಅಗತ್ಯವಿರುವ 270 ಚುನಾವಣಾ ಮತ ಪಡೆಯಲು ಅಮೆರಿಕದ ಬ್ಲೂವಾಲ್‌ ಮತ್ತು ಸನ್‌ ಬೆಲ್ಟ್‌ ಎರಡೂ ವಲಯದಲ್ಲಿ ಪ್ರಚಾರವನ್ನು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.

‘ಚುನಾವಣಾ ಓಟದಲ್ಲಿ ನಾವು ಆರಂಭಿಕ ಹಂತದಲ್ಲಿದ್ದೇವೆ. ಆದರೆ, ಇದು ಜನರೇ ಮುನ್ನಡೆಸುತ್ತಿರುವ ಅಭಿಯಾನವಾಗಿದೆ. ಈ ಅಭಿಯಾನವು ಮುಂದಿನ ದಿನಗಳಲ್ಲಿ ವೇಗ ಪಡೆದುಕೊಳ್ಳಲಿದೆ’ ಎಂದು ವಾರದ ಹಿಂದೆ ಕಮಲಾ ಹೇಳಿದ್ದರು.

ಸ್ಫೂರ್ತಿದಾಯಕ ನಾಯಕಿ: ಬೈಡನ್

‘ಹೊಸ ಪೀಳಿಗೆಗೆ ಸಾರಥ್ಯ ವಹಿಸಲು ಉತ್ತಮ ಮಾರ್ಗ ಗುರುತಿಸಿದ್ದೇನೆ. ಇದು ದೇಶ ಒಗ್ಗೂಡಿಸುವ ಮಾರ್ಗವೂ ಹೌದು. ಸ್ಫೂರ್ತಿದಾಯಕ ನಾಯಕಿಯಾಗಿಯೇ ಕಮಲಾ ಮುಂದುವರಿಯುವರು’ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಆಸ್ಟಿನ್‌ನ ಲಿಂಡನ್‌ ಬಿ ಜಾನ್ಸನ್‌ ಪ್ರೆಸಿಡೆಂಟ್‌ ಗ್ರಂಥಾಲಯದಲ್ಲಿ ಮಾತನಾಡಿದ ಅವರು ‘ಕಮಲಾ ಅವರನ್ನು ನಾನು ಚೆನ್ನಾಗಿ ಬಲ್ಲೆ. ಅವರು ರಾಜಕೀಯ ಬದುಕಿನುದ್ದಕ್ಕೂ ನಾಗರಿಕ ಹಕ್ಕುಗಳಿಗೆ ಹೋರಾಡಿದ್ದಾರೆ. ಅದಕ್ಕಾಗಿ ಪ್ರೇರಣೆ ಆಗಿದ್ದಾರೆ’ ಎಂದು ಬೈಡನ್‌ ಶ್ಲಾಘಿಸಿದ್ದಾರೆ.

ಬೈಡನ್‌ಗಿಂತ ಕೆಟ್ಟ ಅಭ್ಯರ್ಥಿ: ಟ್ರಂಪ್‌

ಅಮೆರಿಕದ ಉಪಾಧ್ಯಕ್ಷೆ  ಡೆಮಾಕ್ರಟಿಕ್‌ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷ ಜೋ ಬೈಡನ್‌ ಅವರಿಗಿಂತ ‘ಕೆಟ್ಟ ಅಭ್ಯರ್ಥಿ’ ಎಂದು ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ‘ಫಾಕ್ಸ್‌ ನ್ಯೂಸ್‌’ ಸುದ್ದಿಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಅವರು ‘ಬೈಡನ್‌ ಅವರಿಗಿಂತಲೂ ಹ್ಯಾರಿಸ್  ಹೆಚ್ಚು ಮೂಲಭೂತವಾದಿ ಎಡಪಂಥೀಯರು’ ಎಂದು ಹೇಳಿದ್ದಾರೆ. ಅಧ್ಯಕ್ಷ ಜೋ ಬೈಡನ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷವು  ಈ ಬಗ್ಗೆ ಮುಂದಿನ ತಿಂಗಳು ಅಧಿಕೃತ ಘೋಷಣೆ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.