ADVERTISEMENT

ಅಮೆಜಾನ್ ಕಾಡಿನಲ್ಲಿ ವಿಮಾನ ಪ‍ತನ: 40 ದಿನಗಳ ಬಳಿಕ ನಾಲ್ವರು ಮಕ್ಕಳು ಜೀವಂತ ಪತ್ತೆ

ಅಮೆಜಾನ್ ಕಾಡಿನಲ್ಲಿ ಲಘು ವಿಮಾನ ಪ‍ತನ

ಎಪಿ
Published 10 ಜೂನ್ 2023, 13:57 IST
Last Updated 10 ಜೂನ್ 2023, 13:57 IST
ಕಾಡಿನ ಸಾಂಕೇತಿಕ ಚಿತ್ರ
ಕಾಡಿನ ಸಾಂಕೇತಿಕ ಚಿತ್ರ   

ಬೊಗೋಟಾ, ಕೊಲಂಬಿಯಾ (ಎಪಿ): ಅಮೆಜಾನ್ ಕಾಡಿನಲ್ಲಿ ವಿಮಾನ ಪ‍ತನ: 40 ದಿನಗಳ ಬಳಿಕ ನಾಲ್ವರು ಮಕ್ಕಳು ಜೀವಂತ ಪತ್ತೆ.

‘ಮಕ್ಕಳು ನಿಶ್ಯಕ್ತರಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡು ಅವರನ್ನು ರಕ್ಷಿಸಿದೆ ಮತ್ತು ಈಗ ಅವರು ಕೊಲಂಬಿಯಾದ ಮಕ್ಕಳು’ ಎಂದು ಅಧ್ಯಕ್ಷ ಗುಸ್ತಾವೊ ಪೆಟ್ರೋ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೈನಿಕರು ಮತ್ತು ಸ್ವಯಂಸೇವಕರ ಗುಂಪು ಕಾಡಿನಲ್ಲಿ ರಕ್ಷಿಸಿದ ಮಕ್ಕಳೊಂದಿಗೆ ಪೋಸ್ ನೀಡುತ್ತಿರುವ ಚಿತ್ರಗಳನ್ನು ಶುಕ್ರವಾರ ಮಿಲಿಟರಿ ಟ್ವೀಟ್ ಮಾಡಿದೆ. 

ADVERTISEMENT

ಮಕ್ಕಳನ್ನು ಶನಿವಾರ ಮುಂಜಾನೆ ರಾಜಧಾನಿ ಬೊಗೋಟಾ ಸೇನಾ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಅಲ್ಲಿಂದ ಆಂಬುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.  

ಈ ಮಕ್ಕಳು ಪತ್ತೆಯಾಗಿದ್ದಾರೆ ಎಂದು ತಿಂಗಳ ಹಿಂದೆಯೇ ಸುದ್ದಿಯಾಗಿತ್ತು. ಅಧ್ಯಕ್ಷ ಪೆಟ್ರೋ ಸಹ ನಾಲ್ಕೂ ಮಕ್ಕಳು ಸಜೀವ ಪತ್ತೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆದರೆ, ನಂತರ ಆ ಸುದ್ದಿ ಸುಳ್ಳು ಎಂದು ವರದಿಯಾಗಿತ್ತು.  

ಮೇ 1ರ ಮುಂಜಾನೆ 7 ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದ ಸೆಸ್ನಾ ಸಿಂಗಲ್ ಎಂಜಿನ್‌ನ ಲಘು ವಿಮಾನವೊಂದು ಎಂಜಿನ್ ವೈಫಲ್ಯದಿಂದಾಗಿ ಪತನವಾಗಿತ್ತು. ಘಟನೆ ಬಳಿಕ ಬದುಕುಳಿದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.

ಅಪಘಾತ ಸಂಭವಿಸಿದ ಎರಡು ವಾರಗಳ ನಂತರ ಶೋಧ ತಂಡವು ಅಮೆಜಾನ್ ದಟ್ಟ ಕಾಡಿನಲ್ಲಿ ವಿಮಾನವನ್ನು ಪತ್ತೆ ಹಚ್ಚಿ, ಪೈಲಟ್‌ ಸೇರಿದಂತೆ ಮೂವರು ವಯಸ್ಕರ ಮೃತದೇಹಗಳನ್ನು ವಶಪಡಿಸಿಕೊಂಡಿತ್ತು. ಆದರೆ, ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಮಕ್ಕಳು ಮಾತ್ರ ಪತ್ತೆಯಾಗಿರಲಿಲ್ಲ. 

ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿತ್ತು. ಹೀಗಾಗಿ ಮಕ್ಕಳು ಬದುಕಿರುವ ನಿರೀಕ್ಷೆಯಲ್ಲಿ ಸೇನೆ ಹುಡುಕಾಟ ತೀವ್ರಗೊಳಿಸಲಾಗಿತ್ತು.

ಕಣ್ಮರೆಯಾಗಿದ್ದವರಲ್ಲಿ 13, 9, 4 ವರ್ಷ ಹಾಗೂ 11 ತಿಂಗಳ ಮಗು ಸಹ ಇತ್ತು. ಮಕ್ಕಳನ್ನು ಪತ್ತೆ ಹಚ್ಚಲು ಶ್ವಾನಗಳೊಂದಿಗೆ 150 ಸೈನಿಕರನ್ನು ಕಳುಹಿಸಿತು. ಸ್ಥಳೀಯ ಬುಡಕಟ್ಟು ಸಮುದಾಯದ ಸ್ವಯಂಸೇವಕರು ಸಹ ಕಾರ್ಯಾಚರಣೆಗೆ ನೆರವು ನೀಡಿದರು. 

ಹಸಿವಿನಿಂದ ಮಕ್ಕಳು ಸಾಯಬಾರದು ಎಂಬ ಕಾರಣಕ್ಕೆ ಆಹಾರ ಪದಾರ್ಥಗಳು ಹಾಗೂ ನೀರಿನ ಬಾಟಲಿಗಳನ್ನು ಕೂಡ ಹೆಲಿಕಾಪ್ಟರ್ ಮೂಲಕ ಅನೇಕ ಕಡೆ ಹಾಕಲಾಗಿತ್ತು. ಎಲ್ಲಿಯೂ ಹೋಗದಂತೆ ಮಕ್ಕಳ ಅಜ್ಜಿಯಿಂದ ಹೇಳಿಸಿ ದಾಖಲಿಸಿಕೊಂಡಿದ್ದ ಸಂದೇಶವನ್ನು ರಕ್ಷಣಾ ಸಿಬ್ಬಂದಿ ನಿರಂತರ ಮೊಳಗಿಸುತ್ತಿದ್ದರು.

ಅಪಘಾತ ನಡೆದ ಸ್ಥಳದ ಪಶ್ಚಿಮ ದಿಕ್ಕಿನಿಂದ ಸುಮಾರು ಐದು ಕಿಮೀ ದೂರದಲ್ಲಿ ಮಕ್ಕಳು ಸಿಕ್ಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.