ಸಾವು (ಪ್ರಾತಿನಿಧಿಕ ಚಿತ್ರ)
ಪೇಶಾವರ: ಅಫ್ಗಾನಿಸ್ತಾನದಿಂದ ಪಾಕಿಸ್ತಾನ ಗಡಿ ದಾಟಲು ಯತ್ನಿಸುತ್ತಿದ್ದ ತೆಹರಿಕ್ ಎ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯ 41 ಉಗ್ರರನ್ನು ಪಾಕ್ ಸೇನೆ ಹೊಡೆದುರುಳಿಸಿದೆ.
ಈ ಘಟನೆ ಅಫ್ಗಾನಿಸ್ತಾನದ ಖೈಬರ್ ಪಂಕ್ತುವಾ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಬಳಿಯ ಬಿಬಾಕ್ ಘರ್ ಹತ್ತಿರ ಇಂದು ನಡೆದಿದೆ.
ಮೃತ ಉಗ್ರರೆಲ್ಲ ಅಪ್ಘಾನಿಸ್ತಾನಕ್ಕೆ ಸಂಬಂಧಿಸಿದವರಾಗಿದ್ದಾರೆ ಎಂದು ವಜಿರಿಸ್ತಾನ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ದಾಟಲು ಯತ್ನಿಸುತ್ತಿದ್ದ ಟಿಟಿಪಿ ಸಂಘಟನೆಯ ಉಗ್ರರ ಜೊತೆ ಸೇನೆ ಗುಂಡಿನ ಕಾಳಗ ನಡೆಸಿದೆ. ಗುಂಡಿನ ಕಾಳಗದಲ್ಲಿ 41ಕ್ಕೂ ಅಧಿಕ ಉಗ್ರರು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಇನ್ನೂ ಹೆಚ್ಚಿನ ಟಿಟಿಪಿ ಸದಸ್ಯರು ಇರುವ ಮಾಹಿತಿ ಇದ್ದು ಸೇನೆ ಗುಂಡಿನ ಕಾಳಗ ಮುಂದುವರೆಸಿದೆ ಎಂದು ತಿಳಿಸಿದೆ.
ಆದರೆ ಈ ಬಗ್ಗೆ ಪಾಕಿಸ್ತಾನ್ ಸೇನೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ತೆಹರಿಕ್ ಎ ತಾಲಿಬಾನ್ ಸಂಘಟನೆ ಎಂಬುದು ಪಾಕಿಸ್ತಾನದಲ್ಲಿ ತಾಲಿಬಾನ್ ಸಿದ್ದಾಂತವನ್ನು ಹೇರುವ ಉಗ್ರವಾದಿ ಸಂಘಟನೆಯಾಗಿದೆ. ಉತ್ತರ ಪಾಕಿಸ್ತಾನದಲ್ಲಿ ಈ ಸಂಘಟನೆ ಆಗಾಗ ವಿಧ್ವಂಸಕ ಕೃತ್ಯಗಳನ್ನು ಎಸಗಿ ಪಾಕಿಸ್ತಾನ ಸೇನೆಗೆ ಉಪಟಳ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.