ADVERTISEMENT

ಬಾಲ್ಯವಿವಾಹ: ಭಾರತ ಸೇರಿ ಐದು ದೇಶಗಳಲ್ಲಿನ ಪ್ರಮಾಣ ಶೇ 50

ಯುನಿಸೆಫ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖ

ಪಿಟಿಐ
Published 8 ಮಾರ್ಚ್ 2021, 14:04 IST
Last Updated 8 ಮಾರ್ಚ್ 2021, 14:04 IST
ಯುನಿಸೆಫ್‌
ಯುನಿಸೆಫ್‌   

ನವದೆಹಲಿ: ವಿಶ್ವದಲ್ಲಿ ನಡೆಯುವ ಬಾಲ್ಯವಿವಾಹಗಳ ಪೈಕಿ ಶೇ 50ರಷ್ಟು ಪ್ರಕರಣಗಳು ಭಾರತ ಸೇರಿದಂತೆ ಐದು ರಾಷ್ಟ್ರಗಳಲ್ಲಿ ವರದಿಯಾಗುತ್ತವೆ ಎಂದು ಯುನಿಸೆಫ್‌ ಹೇಳಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಯುನಿಸೆಫ್‌ ಬಿಡುಗಡೆ ಮಾಡಿರುವ ‘ಕೋವಿಡ್‌–19: ಬಾಲ್ಯವಿವಾಹ ವಿರುದ್ಧದ ಹೋರಾಟದ ಪ್ರಗತಿಗೆ ಅಪಾಯ’ ಎಂಬ ವಿಶ್ಲೆಷಣಾತ್ಮಕ ವರದಿಯಲ್ಲಿ ಈ ಅಂಶ ಇದೆ.

‘ಬಾಲ್ಯವಿವಾಹ ತಡೆಯಲು ಸಾಕಷ್ಟು ಹೋರಾಟ ನಡೆದಿದ್ದರೂ, ಈ ದಶಕದ ಅಂತ್ಯದ ವೇಳೆಗೆ ಒಂದು ಕೋಟಿ ಬಾಲ್ಯವಿವಾಹಗಳು ನೆರವೇರುವ ಅಪಾಯ ತಪ್ಪಿದ್ದಲ್ಲ’ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ADVERTISEMENT

ಬಾಲ್ಯವಿವಾಹಕ್ಕೆ ಒಳಗಾಗಿ, ಸದ್ಯ ಬದುಕು ಸಾಗಿಸುತ್ತಿರುವ ಮಹಿಳೆಯರ ಸಂಖ್ಯೆ 65 ಕೋಟಿ. ಈ ಪೈಕಿ ಶೇ 50ರಷ್ಟು ಮಹಿಳೆಯರು ಬಾಂಗ್ಲಾದೇಶ, ಬ್ರೆಜಿಲ್‌, ಇಥಿಯೋಪಿಯಾ, ಭಾರತ ಹಾಗೂ ನೈಜೀರಿಯಾಕ್ಕೆ ಸೇರಿದವರಾಗಿದ್ದಾರೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

‘ಒಂದು ವರ್ಷ ಕಾಲ ಇಡೀ ಜಗತ್ತನ್ನು ಕೋವಿಡ್‌ ಪಿಡುಗು ಬಾಧಿಸಿದೆ. ಈ ಅವಧಿಯಲ್ಲಿ ಬಾಲಕಿಯರು ಹಾಗೂ ಅವರ ಕುಟುಂಬಗಳನ್ನು ಈ ಅನಿಷ್ಟ ಪದ್ಧತಿಯಿಂದ ರಕ್ಷಿಸುವುದು ಇಂದಿನ ತುರ್ತು ಅಗತ್ಯ. ಇದಕ್ಕಾಗಿ ಶಾಲೆಗಳನ್ನು ಪುನಃ ಆರಂಭಿಸಬೇಕು, ಬಾಲ್ಯವಿವಾಹ ತಡೆಗೆ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಆರೋಗ್ಯ ಸೇವೆಗೆ ಒತ್ತು ನೀಡಬೇಕು’ ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಹೆನ್ರೀಟಾ ಫೋರ್‌ ಪ್ರತಿಪಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.