ADVERTISEMENT

ಬುಲೆಟ್‌ ರೈಲು ಯೋಜನೆ ಜಪಾನ್‌ ಕಂಪೆನಿಗಳ ಪಾರಮ್ಯ

ಏಜೆನ್ಸೀಸ್
Published 18 ಜನವರಿ 2018, 20:27 IST
Last Updated 18 ಜನವರಿ 2018, 20:27 IST
ಬುಲೆಟ್‌ ರೈಲು ಯೋಜನೆ ಜಪಾನ್‌ ಕಂಪೆನಿಗಳ ಪಾರಮ್ಯ
ಬುಲೆಟ್‌ ರೈಲು ಯೋಜನೆ ಜಪಾನ್‌ ಕಂಪೆನಿಗಳ ಪಾರಮ್ಯ   

ನವದೆಹಲಿ/ಟೊಕಿಯೊ: ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಅಗತ್ಯವಿರುವ ಅತಿ ಮುಖ್ಯ ಸಾಮಗ್ರಿಗಳನ್ನು ಪೂರೈಸಲು ಜಪಾನ್‌ನ ಉಕ್ಕು ಮತ್ತು ಎಂಜಿನಿಯರಿಂಗ್‌ ಕಂಪನಿಗಳು ಅತಿ ಹೆಚ್ಚು ಆಸಕ್ತಿ ವಹಿಸಿವೆ.

ಈ ಯೋಜನೆಗೆ ಬಹುತೇಕ ಆರ್ಥಿಕ ನೆರವನ್ನು ಜಪಾನ್‌ ನೀಡುತ್ತಿದೆ ಮತ್ತು ಕನಿಷ್ಠ ಶೇಕಡ 70 ಪ್ರಮುಖ ಸಾಮಗ್ರಿಗಳನ್ನು ಜಪಾನ್‌ ಕಂಪನಿಗಳು ಪೂರೈಸಲಿವೆ. ಆದರೆ, ಇದು ‘ಭಾರತದಲ್ಲೇ ತಯಾರಿಸಿ’ ಎನ್ನುವ ನೀತಿಗೆ ವ್ಯತಿರಿಕ್ತವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬುಲೆಟ್‌ ರೈಲು ಯೋಜನೆ ಅನುಷ್ಠಾನಗೊಳಿಸುತ್ತಿರುವ ’ನ್ಯಾಷನಲ್‌ ಹೈ ಸ್ಪೀಡ್‌ ರೈಲ್‌ ಕಾರ್ಪೋರೇಷನ್‌ ಲಿಮಿಟೆಡ್‌’ (ಎನ್‌ಎಚ್‌ಎಸ್‌ಆರ್‌ಸಿಎಲ್‌), ಒಟ್ಟಾರೆ ಯೋಜನಾ ವೆಚ್ಚದ ಶೇಕಡ 18ರಷ್ಟು ಸಾಮಗ್ರಿಗಳನ್ನು ಮಾತ್ರ ಜಪಾನ್‌ ಪೂರೈಸಲಿದೆ ಎಂದು ತಿಳಿಸಿದೆ.

ADVERTISEMENT

‘ಕೆಲವು ವಿಷಯಗಳ ಬಗ್ಗೆ ಜಪಾನ್‌ ಆಕ್ಷೇಪ ವ್ಯಕ್ತಪಡಿಸಿದೆ. ಜಪಾನ್‌ ಮತ್ತು ಭಾರತದಲ್ಲಿನ ವ್ಯವಸ್ಥೆಗಳು ವಿಭಿನ್ನವಾಗಿವೆ. ಅದರಲ್ಲೂ ಭಾರತದಲ್ಲಿ ಕೆಲಸದ ಸಂಸ್ಕೃತಿ ಭಿನ್ನವಾಗಿದೆ’ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಚಲ್‌ ಖರೆ ತಿಳಿಸಿದ್ದಾರೆ.

ಆದರೆ, ಭಾರತದ ಕಂಪೆನಿಗಳ ಸಾಮರ್ಥ್ಯದ ಬಗ್ಗೆಯೇ ಜಪಾನ್‌ ಅನುಮಾನ ವ್ಯಕ್ತಪಡಿಸಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಹೈಸ್ಪೀಡ್‌ ರೈಲು ವ್ಯವಸ್ಥೆ ಬಗ್ಗೆ ಭಾರತೀಯ ಕಂಪನಿಗಳಿಗೆ ಯಾವುದೇ ಅನುಭವ ಇಲ್ಲ ಅಥವಾ ತಂತ್ರಜ್ಞಾನದ ಪರಿಣತಿಯೂ ಇಲ್ಲ. ಆದರೆ. ನಮಗೆ ನೌಕರರ ಕೆಲಸದ ಸಂಸ್ಕೃತಿ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದು ಜಪಾನ್‌ನ ಸಾರಿಗೆ ಸಚಿವಾಲಯದ ಅಂತರರಾಷ್ಟ್ರೀಯ ಎಂಜಿನಿಯರಿಂಗ್‌ ವ್ಯವಹಾರಗಳ ನಿರ್ದೇಶಕ ಟೊಮೊಯುಕಿ ನಕನೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.