ADVERTISEMENT

ಪಾಕ್‌ ವಿಮಾನ ದುರಂತದಲ್ಲಿ 97 ಮಂದಿ ಸಾವು: ಇಬ್ಬರು ಪಾರು 

ಏಜೆನ್ಸೀಸ್
Published 23 ಮೇ 2020, 3:06 IST
Last Updated 23 ಮೇ 2020, 3:06 IST
ಜನವಸತಿ ಪ್ರದೇಶದ ಮೇಲೆ ಪತನವಾಗಿರುವ ವಿಮಾನದ ಅವಶೇಷಗಳು
ಜನವಸತಿ ಪ್ರದೇಶದ ಮೇಲೆ ಪತನವಾಗಿರುವ ವಿಮಾನದ ಅವಶೇಷಗಳು    

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಶುಕ್ರವಾರ ಮಧ್ಯಾಹ್ನಸಂಭವಿಸಿದ ವಿಮಾನ ದುರಂತದಲ್ಲಿ 97 ಮಂದಿ ಮೃತಪಟ್ಟಿದ್ದು, ಇಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹಗಳನ್ನು ದುರಂತ ಸ್ಥಳದಿಂದ ಹೊರ ತೆಗೆಯಲಾಗಿದೆ. ಈ ವರೆಗೆ 19 ಮಂದಿಯ ಗುರುತು ಪತ್ತೆ ಮಾಡಲಾಗಿದೆ ಎಂದು ಸಿಂದ್‌ ಪ್ರಾಂತ್ಯದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

ಶುಕ್ರವಾರ ಮಧ್ಯಾಹ್ನ ಆರಂಭವಾದ ರಕ್ಷಣಾ ಕಾರ್ಯಾಚರಣೆಯು ಮುಂದುವರಿದಿರುವುದಾಗಿ ಪಾಕಿಸ್ತಾನದ ‘ದಿ ಡಾನ್‌’ ಪತ್ರಿಕೆ ವೆಬ್‌ಸೈಟ್‌ ವರದಿ ಮಾಡಿದೆ.

ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ಗೆ (ಪಿಐಎ) ಸೇರಿದ ವಿಮಾನ ಶುಕ್ರವಾರ ಮಧ್ಯಾಹ್ನ ಕರಾಚಿಯ ಜನದಟ್ಟಣೆಯಿಂದ ಕೂಡಿದ ವಸತಿ ಪ್ರದೇಶದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿ 107 ಜನರಿದ್ದರು. ಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲವೇ ನಿಮಿಷಗಳ ಮುನ್ನ ವಿಮಾನ ದುರಂತಕ್ಕೀಡಾಗಿತ್ತು.

‘ವಿಮಾನ ಇಳಿಸುವಾಗ ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದು ಪೈಲಟ್‌‌ ಮಾಹಿತಿ ನೀಡಿದ್ದರು. ಕರಾಚಿ ವಿಮಾನ ನಿಲ್ದಾಣದ ಜತೆ ವಿಮಾನವು ಮಧ್ಯಾಹ್ನ 2.37ರ ಸುಮಾರಿಗೆ ಸಂಪರ್ಕ ಕಳೆದುಕೊಂಡಿತು’ ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್‌ ತಿಳಿಸಿದ್ದರು.

ಕರಾಚಿಯ ಮಾಡೆಲ್‌ ಕಾಲೋನಿಯ ಮನೆಗಳ ಮೇಲೆಯೇ ವಿಮಾನ ಪತನಗೊಂಡಿದ್ದು, ಕೆಲ ಕ್ಷಣಗಳಲ್ಲಿಯೇ ಇಡೀ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಆವರಿಸಿಕೊಂಡಿತು. ಈ ಘಟನೆಯಲ್ಲಿ ಹಲವು ಮನೆಗಳು ಮತ್ತು ವಾಹನಗಳು ಜಖಂಗೊಂಡಿವೆ. ಈ ಪ್ರದೇಶದಲ್ಲಿನ ಸುಮಾರು 30 ಮಂದಿ ತೀವ್ರ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.