ನ್ಯೂಯಾರ್ಕ್: ಹಮಾಸ್ ವಿಚಾರಧಾರೆ ಹರಡುತ್ತಿರುವ ಆರೋಪದಲ್ಲಿ ಬಂಧಿತರಾಗಿರುವ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಭಾರತ ಮೂಲದ ಸಂಶೋಧನಾ ವಿದ್ಯಾರ್ಥಿ ಬದರ್ ಖಾನ್ ಸೂರಿಯವರ ಗಡೀಪಾರು ಮಾಡುವ ಟ್ರಂಪ್ ಆಡಳಿತದ ಆದೇಶಕ್ಕೆ ಫೆಡರಲ್ ನ್ಯಾಯಾಧೀಶರು ತಡೆ ನೀಡಿದ್ದಾರೆ.
‘ನ್ಯಾಯಾಲಯ ಹೇಳುವವರೆಗೂ ಅವರನ್ನು ಅಮೆರಿಕದಿಂದ ಹೊರಗೆ ಕಳುಹಿಸುವಂತಿಲ್ಲ’ ಎಂದು ವರ್ಜೀನಿಯಾದ ಅಲೆಕ್ಸಾಂಡ್ರಿಯಾದ ಜಿಲ್ಲಾ ನ್ಯಾಯಾಧೀಶರಾದ ಪೆಟ್ರೀಷಿಯಾ ಟೋಲಿವರ್ ಗೈಲ್ಸ್ ಹೇಳಿದ್ದಾರೆ.
ಬದರ್ ಖಾನ್ ಸೂರಿಯವರು ಪ್ಯಾಲೆಸ್ಟೀನ್ ಬಂಡುಕೋರ ಗುಂಪು ಹಮಾಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅಮೆರಿಕದ ಗೃಹ ಭದ್ರತಾ ಇಲಾಖೆ ಆರೋಪಿಸಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಹಮಾಸ್ ಪ್ರಚಾರ ಮತ್ತು ಯಹೂದಿ ವಿರೋಧಿ ವಿಚಾರ ಹರಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಸೂರಿ ಅವರ ಚಟುವಟಿಕೆಗಳು ‘ಅವರನ್ನು ಗಡೀಪಾರು ಮಾಡಲು ಅರ್ಹರನ್ನಾಗಿ ಮಾಡಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದರು.
ಸೂರಿಯವರು ವಿದ್ಯಾರ್ಥಿ ವಿಸಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ ಅಮೆರಿಕನ್ ಪ್ರಜೆಯನ್ನೂ ಮದುವೆಯಾಗಿದ್ದಾರೆ.
ಫೆಡರಲ್ ಏಜೆಂಟರು ಸೋಮವಾರ ರಾತ್ರಿ ವರ್ಜೀನಿಯಾದ ರೋಸ್ಲಿನ್‌ನಲ್ಲಿರುವ ಮನೆಯ ಬಳಿ ಬದರ್ ಸೂರಿಯವರನ್ನು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.