ADVERTISEMENT

ಅಫ್ಗಾನಿಸ್ತಾನ: 9 ಮಹಿಳೆ ಸೇರಿ19 ಜನರಿಗೆ ಛಡಿಯೇಟು ಶಿಕ್ಷೆ

ಏಜೆನ್ಸೀಸ್
Published 20 ನವೆಂಬರ್ 2022, 11:33 IST
Last Updated 20 ನವೆಂಬರ್ 2022, 11:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್‌: ಅಕ್ರಮ ಸಂಬಂಧ, ಕಳವು, ಮನೆಯಿಂದ ಓಡಿಹೋಗಿರುವುದು ಸೇರಿ ವಿವಿಧ ಆರೋಪಗಳು ಸಾಬೀತಾದ್ದರಿಂದ ಒಂಭತ್ತು ಮಹಿಳೆಯರು ಸೇರಿ 19 ಮಂದಿಗೆ ಅಫ್ಗಾನಿಸ್ತಾನದಲ್ಲಿ ಛಡಿಯೇಟು ಶಿಕ್ಷೆ ನೀಡಲಾಗಿದೆ.

ಈ ಮೂಲಕ ದೇಶದಲ್ಲಿ ಇಸ್ಲಾಮಿಕ್‌ ಕಾನೂನು ಅಥವಾ ಶರಿಯಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂಬ ಸೂಚನೆಯನ್ನು ತಾಲಿಬಾನ್‌ ಆಡಳಿತವು ದೃಢಪಡಿಸಿದೆ.

ಅಫ್ಗಾನಿಸ್ತಾನದಲ್ಲಿ 2021ರ ಆಗಸ್ಟ್‌ನಲ್ಲಿ ಆಡಳಿತವನ್ನು ವಶಕ್ಕೆ ಪಡೆದಿದ್ದ ತಾಲಿಬಾನ್, ಇದೇ ಮೊದಲ ಬಾರಿಗೆ ಛಡಿಯೇಟು ಶಿಕ್ಷೆ ನೀಡಿರುವುವನ್ನು ಅಧಿಕೃತವಾಗಿ ಪ್ರಕಟಿಸಿದೆ. ಹಿಂದೆ 1990ರ ತಾಲಿಬಾನ್‌ ಆಡಳಿತ ಅವಧಿಯಲ್ಲಿ ಸಾರ್ವಜನಿಕವಾಗಿಯೇ ಛಡಿಯೇಟು, ಕಲ್ಲಿನಿಂದ ಹಲ್ಲೆ ಮಾಡುವ ಶಿಕ್ಷೆಯನ್ನು ಅಪರಾಧಿಗಳಿಗೆ ನೀಡಲಾಗುತ್ತಿತ್ತು.

ADVERTISEMENT

ಶರಿಯಾ ಕಾಯ್ದೆಯ ಕಟ್ಟುನಿಟ್ಟಿನ ಜಾರಿಗೆ ನಾವು ಬದ್ಧರಿದ್ದೇವೆ ಎಂದು ತಾಲಿಬಾನ್‌ನ ವಕ್ತಾರರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಅಧಿಕಾರಿ ಅಬ್ದುಲ್‌ ರಹೀಂ ರಷೀದ್‌ ಪ್ರಕಾರ, 9 ಮಹಿಳೆಯರು, 10 ಪುರುಷರಿಗೆ ಛಡಿಯೇಟು ಶಿಕ್ಷೆ ವಿಧಿಸಲಾಗಿದೆ. ಠಕ್ಕರ್ ಪ್ರಾಂತ್ಯದ ತಲೊಗನ್ ನಗರದ ಪ್ರಮುಖ ಮಸೀದಿಯೊಂದರ ಎದುರು ಹಿರಿಯರು, ವಿದ್ವಾಂಸರು, ನಿವಾಸಿಗಳ ಎದುರೇ ತಲಾ 39 ಛಡಿಯೇಟು ನೀಡುವ ಶಿಕ್ಷೆ ಜಾರಿಗೊಳಿಸಲಾಗಿದೆ.

ಇವರ ವಿರುದ್ಧ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಅಪರಾಧ ಸಾಬೀತಾಗಿತ್ತು ಎಂದು ತಿಳಿಸಿದ್ದಾರೆ. ಶಿಕ್ಷೆಗೆ ಒಳಗಾದವರು ಯಾರು, ಛಡಿಯೇಟು ಬಳಿಕ ಅವರ ಸ್ಥಿತಿ ಏನಾಗಿತ್ತು ಎಂಬುದರ ವಿವರಗಳನ್ನು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.