ADVERTISEMENT

ಅಫ್ಗಾನಿಸ್ತಾನ: ಕೇವಲ 2 ದಿನಗಳಲ್ಲಿ 119 ಮಂದಿ ಸಾವು

ಏಜೆನ್ಸೀಸ್
Published 7 ಜೂನ್ 2021, 1:19 IST
Last Updated 7 ಜೂನ್ 2021, 1:19 IST
ಅಫ್ಗಾನಿಸ್ತಾನದಲ್ಲಿ ಜೂನ್ 3ರಂದು ನಡೆದ ಸ್ಫೋಟದ ಬಳಿಕ ಕಂಡುಬಂದ ದೃಶ್ಯ
ಅಫ್ಗಾನಿಸ್ತಾನದಲ್ಲಿ ಜೂನ್ 3ರಂದು ನಡೆದ ಸ್ಫೋಟದ ಬಳಿಕ ಕಂಡುಬಂದ ದೃಶ್ಯ   

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಅಮೆರಿಕ ಸೈನ್ಯವು ಹಿಂದೆ ಸರಿದ ನಂತರ ಹಿಂಸಾಚಾರದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದ್ದು, ಕೇವಲ ಎರಡು ದಿನಗಳಲ್ಲಿ (ಜೂ.3 ಹಾಗೂ 4) ನಡೆದ ಘಟನೆಗಳಲ್ಲಿ ಭದ್ರತಾ ಪಡೆಯ 102 ಸಿಬ್ಬಂದಿ ಸೇರಿದಂತೆ 119 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೊಲೊ ನ್ಯೂಸ್ ವರದಿ ಪ್ರಕಾರ ಘಟನೆಯಲ್ಲಿ ಭದ್ರತಾ ಪಡೆಯ 196 ಸಿಬ್ಬಂದಿ ಗಾಯಗೊಂಡಿದ್ದಾರೆ.

ಭದ್ರತಾ ಪಡೆಗೆ ಹೋಲುವಷ್ಟೇ ತಾಲಿಬಾನ್ ಕಡೆಯಿಂದಲೂ ಸಾವು-ನೋವು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಜೂನ್ 3ರಂದು ಎಂಟು ಪ್ರಾಂತ್ಯಗಳಲ್ಲಿ ಮತ್ತು ಜೂನ್ 4ರಂದು ಆರು ಪ್ರಾಂತ್ಯಗಳಲ್ಲಿ ಅಫ್ಗಾನ್ ರಕ್ಷಣಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಅನುಕ್ರಮವಾಗಿ 183 ಹಾಗೂ 181 ತಾಲಿಬಾನಿಗಳನ್ನು ಕೊಲೆಗೈಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದು ಯುದ್ಧಪೀಡಿತ ಪ್ರದೇಶದಲ್ಲಿ ಸಂಘರ್ಷದ ತೀವ್ರತೆಯನ್ನು ತೋರಿಸುತ್ತದೆ. ರಕ್ಷಣಾ ಸಚಿವಾಲಯದ ವರದಿ ಪ್ರಕಾರ ಪ್ರತಿದಿನ ಕನಿಷ್ಠ 10 ಪ್ರಾಂತ್ಯಗಳಲ್ಲಿ ಘರ್ಷಣೆ ನಡೆಯುತ್ತಿದೆ.

ಹಾಗಿದ್ದರೂ ಈ ಅಂಕಿಗಳನ್ನು ತಾಲಿಬಾನ್ ನಿರಾಕರಿಸಿದೆ. ಸಾಮಾನ್ಯವಾಗಿ ಸಾವು-ನೋವುಗಳ ನಿಖರ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.