ADVERTISEMENT

ಸೇಡಿನ ಕ್ರಮಕ್ಕೆ ಮುಂದಾದ ತಾಲಿಬಾನ್‌: ಪತ್ರಕರ್ತನ ಸಂಬಂಧಿ ಹತ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2021, 19:52 IST
Last Updated 20 ಆಗಸ್ಟ್ 2021, 19:52 IST
ತಾಲಿಬಾನ್‌ ಉಗ್ರರು- ಪ್ರಾತಿನಿಧಿಕ ಚಿತ್ರ
ತಾಲಿಬಾನ್‌ ಉಗ್ರರು- ಪ್ರಾತಿನಿಧಿಕ ಚಿತ್ರ    

ಬರ್ಲಿನ್‌ : ಅಫ್ಗಾನಿಸ್ತಾನದಲ್ಲಿ ಮನೆ–ಮನೆ ಹೊಕ್ಕು ಪತ್ರಕರ್ತರ ಶೋಧ ನಡೆಸುತ್ತಿರುವ ತಾಲಿಬಾನಿಗಳು, ಜರ್ಮನಿಯ ಡಿಡಬ್ಲ್ಯು ಸರ್ಕಾರಿ ಪ್ರಸಾರ ಸಂಸ್ಥೆಯ ಪತ್ರಕರ್ತರೊಬ್ಬರ ಸಂಬಂಧಿಯೊಬ್ಬನನ್ನು ಗುರುವಾರ ಗುಂಡಿಕ್ಕಿ ಕೊಂದಿದ್ದಾರೆ.

ಅವರ ಇನ್ನೊಬ್ಬ ಸಂಬಂಧಿ ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರು ತಪ್ಪಿಸಿಕೊಂಡಿದ್ದಾರೆ. ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಸಂಸ್ಥೆಯ ಪತ್ರಕರ್ತ, ಇದೀಗ ಜರ್ಮನಿಯಲ್ಲೇ ಕೆಲಸ ಮಾಡುತ್ತಿರುವುದಾಗಿ ಸಂಸ್ಥೆಯು ತಿಳಿಸಿದೆ.

ಪತ್ರಕರ್ತನ ಸಂಬಂಧಿಯ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಡಿಡಬ್ಲ್ಯು ಮಹಾನಿರ್ದೇಶಕ ಪೀಟರ್‌ ಲಿಂಬರ್ಗ್, ಅಫ್ಗಾನಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಮಾಧ್ಯಮದವರು ಹಾಗೂ ಅವರ ಕುಟುಂಬದವರು ಎಷ್ಟು ಅಪಾಯದಲ್ಲಿದ್ದಾರೆ ಎಂಬುದು ಇದರಿಂದ ವೇದ್ಯವಾಗುತ್ತದೆ ಎಂದಿದ್ದಾರೆ.

ADVERTISEMENT

‘ಕಾಬೂಲ್‌ ಹಾಗೂ ಇತರ ಪ್ರಾಂತ್ಯದಲ್ಲಿ ತಾಲಿಬಾನಿಗಳು ಮಾಧ್ಯಮ ಪ್ರತಿನಿಧಿಗಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ’ ಎಂದು ಪೀಟರ್‌ ಹೇಳಿದ್ದಾರೆ.

ಭಾರತದ ಕಾನ್ಸಲೇಟ್‌ ಕಚೇರಿ ಶೋಧ:

ನವದೆಹಲಿ: ಅಫ್ಗಾನಿಸ್ತಾನದಲ್ಲಿರುವ ಭಾರತದ ಎರಡು ಕಾನ್ಸಲೇಟ್ ಕಚೇರಿಗಳಿಗೆ ತಾಲಿಬಾನ್ ಉಗ್ರರು ನುಗ್ಗಿ, ಶೋಧ ನಡೆಸಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

'ಕಂದಹಾರ್ ಮತ್ತು ಹೆರಾತ್‌ನಲ್ಲಿರುವ ಭಾರತೀಯ ಕಾನ್ಸಲೇಟ್ ಕಚೇರಿಗಳಿಗೆ ಬುಧವಾರ ತಾಲಿಬಾನ್ ಉಗ್ರರು ನುಗ್ಗಿದ್ದರು. ಎರಡೂ ಕಚೇರಿಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ. ಆದರೆ ಕಚೇರಿಯಲ್ಲಿ ವಿವಿಧ ದಾಖಲೆಗಳಿಗಾಗಿ ಉಗ್ರರು ಶೋಧ ನಡೆಸಿದ್ದಾರೆ. ಆನಂತರ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಕಾನ್ಸಲೇಟ್‌ಗಳಿಗೆ ಸೇರಿದ ಕಾರುಗಳನ್ನು ಒಯ್ದಿದ್ದಾರೆ ಎಂದು ಮೂಲಗಳು ಹೇಳಿವೆ’ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ಭಾರತದ ರಾಯಭಾರ ಕಚೇರಿ, ಕಾನ್ಸಲೇಟ್ ಕಚೇರಿಗಳ ಸಿಬ್ಬಂದಿಗೆ ಯಾವುದೇ ತೊಂದರೆ ನೀಡುವುದಿಲ್ಲ’ ಎಂದು ಭಾರತಕ್ಕೆ ತಾಲಿಬಾನ್ಅಧಿಕೃತವಾಗಿ ಮಂಗಳವಾರ ಸಂದೇಶ ಕಳುಹಿಸಿತ್ತು. ಆದರೆ, ಅದರ ಮರುದಿನವೇ ಈ ದಾಳಿ ನಡೆದಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.