ADVERTISEMENT

ತಾಲಿಬಾನ್ ಗೆದ್ದರೆ ಅಫ್ಗಾನಿಸ್ತಾನದಲ್ಲಿ ಅಂತರ್‌ಯುದ್ಧ ಸೃಷ್ಟಿ ಭೀತಿ: ಹರ್ಲನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2021, 2:18 IST
Last Updated 14 ಆಗಸ್ಟ್ 2021, 2:18 IST
   

ವಾಷಿಂಗ್ಟನ್:ತಾಲಿಬಾನ್‌ ಉಗ್ರ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ಹಲವು ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದೆ. ಇದರಿಂದಾಗಿ ಅಫ್ಗಾನ್‌ನಲ್ಲಿನಾಗರಿಕ ಯುದ್ಧಮತ್ತು ಆ ಸಂಘಟನೆಯ ವಿರುದ್ಧ ದಂಗೆಗಳು ಆರಂಭವಾಗಬಹುದು ಎಂದು ರಾಜಕೀಯ ವಿಶ್ಲೇಷಕ ಹರ್ಲನ್‌ ಉಲ್ಮನ್‌ ಹೇಳಿದ್ದಾರೆ.

ಚಿಂತಕರ ಚಾವಡಿ ʼಅಟ್ಲಾಂಟಿಕ್‌ ಕೌನ್ಸಿಲ್‌ʼನ ಹಿರಿಯ ಸಲಹೆಗಾರರಾಗಿರುವ ಹರ್ಲನ್‌, ʼದಿ ಹಿಲ್‌ʼ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ.

ʼಕಾಬೂಲ್‌ ಸರ್ಕಾರ ಪತನವಾದರೆ ಅಥವಾ ಅಧಿಕಾರವನ್ನು ಬಿಟ್ಟುಕೊಟ್ಟರೆ, ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಪ್ರಭುತ್ವವು ನಿಸ್ಸಂಶಯವಾಗಿ ಮತ್ತೊಮ್ಮೆ ಸೋಲು ಅನುಭವಿಸಿದಂತಾಗುತ್ತದೆ. ತಾಲಿಬಾನ್‌ಗೆ ಸಿಕ್ಕ ಜಯ ಆ ದೇಶಕ್ಕೆ ದೊರೆತ ʼಉತ್ತಮ ಭವಿಷ್ಯʼ ಎಂದು ಅರ್ಥವಲ್ಲ.ಪ್ರಾಂತ್ಯಗಳಲ್ಲಿ ಸಂಘಟನೆಯ ಆಡಳಿತವು ಬದಲಾಗುವ ಸಾಧ್ಯತೆ ಇದೆʼ ಎಂದಿದ್ದಾರೆ.

ADVERTISEMENT

ʼಕೆಲವು ಸಂದರ್ಭಗಳಲ್ಲಿ, ತಾಲಿಬಾನ್‌ಗೆ ಅವಕಾಶಗಳನ್ನು ನೀಡಿ ಅಥವಾ ಅದರ ನಿಯಂತ್ರಣಗಳನ್ನು ಮೀರಿ ಸ್ಥಳೀಯ ನಾಯಕರೇ ಅಧಿಕಾರದಲ್ಲಿ ಉಳಿಯುತ್ತಾರೆ. ಇದು ಸ್ಥಳೀಯ ದಂಗೆಗಳನ್ನು ಅಥವಾ ತಾಲಿಬಾನ್‌ ವಿರುದ್ಧದ ಬಂಡಾಯವನ್ನು ಏಕಾಏಕಿ ಉಂಟುಮಾಡಬಹುದು.ಈ ಹೋರಾಟಗಳು ನಿರಂತರವಾಗಿ ಮತ್ತು ವ್ಯಾಪಕವಾಗಿ ನಡೆಯಬಹುದೇ ಎಂಬುದು, ತಾಲಿಬಾನ್‌ನ ಆಡಳಿತ, ಅದರ ಹಿಂಸಾಚಾರ ಮತ್ತು ಸಂಘರ್ಷದ ಬಳಿಕವೂ ಹೋರಾಟವನ್ನು ಮುಂದುವರಿಸುವ ಅಫ್ಗಾನಿಸ್ತಾನದ ಸಾಮರ್ಥ್ಯದ ಮೇಲೆ ನಿಂತಿದೆʼ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನವು ತನ್ನ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮೂಲಕ ತಾಲಿಬಾನ್‌ ಮೇಲೆ ಪ್ರಭಾವ ಉಂಟುಮಾಡುವ ಯತ್ನಿಸಲಿದೆ. ಇದರಿಂದಾಗಿ ಅಮೆರಿಕ ಜೊತೆಗಿನಹದಗೆಟ್ಟಿರುವಸಂಬಂಧವನ್ನು ಸುಧಾರಿಸುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಯತ್ನಕ್ಕೆ ಸೋಲಾಗಲಿದೆ ಎಂದೂ ವಿಶ್ಲೇಷಿಸಿದ್ದಾರೆ.​

ಮುಂದುವರಿದು,ʼಅಫ್ಗಾನ್‌ನಲ್ಲಿ ತಾಲಿಬಾನ್‌ಗೆ ಬೆಂಬಲ ನೀಡುವುದಿಲ್ಲ ಎಂಬಪಾಕಿಸ್ತಾನದ ನಕಲಿತನದ ಬಗ್ಗೆ ಅಮೆರಿಕಕ್ಕೆ ಯಾವುದೇ ಭ್ರಮೆಗಳಿಲ್ಲ. ಉಗ್ರವಾದ ಹೆಚ್ಚಾದಂತೆ, ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯದ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಳವಳ ಹೆಚ್ಚುತ್ತದೆʼ ಎಂದು ಉಲ್ಮನ್‌ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.