ADVERTISEMENT

ಮರಳಿ ಅಧಿಕಾರಕ್ಕೆ ಬಂದು ವರ್ಷ: ತಾಲಿಬಾನಿಗಳ ಹರ್ಷ

ಬದಲಾಗದ ಹೆಣ್ಣು ಮಕ್ಕಳ ಸ್ಥಿತಿ * ಆರ್ಥಿಕತೆಯ ಹಿಮ್ಮುಖ ಚಲನೆ

ಏಜೆನ್ಸೀಸ್
Published 15 ಆಗಸ್ಟ್ 2022, 13:50 IST
Last Updated 15 ಆಗಸ್ಟ್ 2022, 13:50 IST
ಮರಳಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಾಲಿಬಾನ್‌ ಹೋರಾಟಗಾರರು ಕಾಬೂಲ್‌ನಲ್ಲಿದ್ದ ಅಮೆರಿಕ ರಾಯಭಾರ ಕಚೇರಿ ಎದುರು ಘೋಷಣೆಗಳನ್ನು ಕೂಗಿ ಸೋಮವಾರ ಸಂಭ್ರಮಾಚರಣೆ ಮಾಡಿದರು -ಪಿಟಿಐ ಚಿತ್ರ
ಮರಳಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಾಲಿಬಾನ್‌ ಹೋರಾಟಗಾರರು ಕಾಬೂಲ್‌ನಲ್ಲಿದ್ದ ಅಮೆರಿಕ ರಾಯಭಾರ ಕಚೇರಿ ಎದುರು ಘೋಷಣೆಗಳನ್ನು ಕೂಗಿ ಸೋಮವಾರ ಸಂಭ್ರಮಾಚರಣೆ ಮಾಡಿದರು -ಪಿಟಿಐ ಚಿತ್ರ   

ಕಾಬೂಲ್‌: ಅಘ್ಗಾನಿಸ್ತಾನದ ರಾಜಧಾನಿ ಕಾಬೂಲ್‌ ಅನ್ನು ವಶಪಡಿಸಿಕೊಂಡು ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ, ತಾಲಿಬಾನ್‌ ಸೋಮವಾರ ಸಂಭ್ರಮಾಚರಣೆ ಮಾಡಿದೆ.‌

ಮತ್ತೆ ಅಧಿಕಾರಕ್ಕೆ ಬಂದ ವರ್ಷಚಾರಣೆ ಸಂಬಂಧ, ತಾಲಿಬಾನ್‌ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿತ್ತು. ತಾಲಿಬಾನ್‌ ಹೋರಾಟಗಾರರು ಬಂದೂಕು, ಬ್ಯಾನರ್‌ಗಳನ್ನು ಹಿಡಿದು ಕಾಬೂಲ್‌ನ ಬೀದಿಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಕೆಲವರು ಸೈಕಲ್‌ ಹಾಗೂ ಬೈಕ್‌ ರ್‍ಯಾಲಿಗಳನ್ನೂ ನಡೆಸಿದರು. ಅಮೆರಿಕ ರಾಯಭಾರ ಕಚೇರಿ ಇದ್ದ ಕಟ್ಟಡದ ಬಳಿ ತೆರಳಿದ ತಾಲಿಬಾಲ್‌ ಹೋರಾಟಗಾರರ ಪುಟ್ಟ ಗುಂಪೊಂದು ‘ಇಸ್ಲಾಂಗೆ ಜಯವಾಗಲಿ’ ಮತ್ತು ‘ಅಮೆರಿಕ ಸಾಯಲಿ’ ಎಂಬ ಘೋಷಣೆಗಳನ್ನು ಕೂಗಿದರು.

ತಾಲಿಬಾನಿಗಳು ಕಾಬೂಲ್‌ನನ್ನು ವಶಪಡಿಸಿಕೊಂಡ ಒಂದು ವರ್ಷದ ಬಳಿಕ, ದೇಶದ ಆರ್ಥಿಕ ಸ್ಥಿತಿಯು ತೀರಾ ಹದಗೆಟ್ಟಿದೆ. ವರ್ಷದ ಹಿಂದೆ ತಾಲಿಬಾನ್‌ ಆಡಳಿತದಿಂದ ತಪ್ಪಿಸಿಕೊಳ್ಳಲು ಇಲ್ಲಿನ ಲಕ್ಷಾಂತರ ಮಂದಿ ಇತರೆ ದೇಶಗಳಿಗೆ ವಲಸೆ ಹೋದರು. ವಿದೇಶಿ ನೆರವು ಕಡಿತವಾಯಿತು. ಇದರಿಂದಾಗಿ ಇಲ್ಲಿನ ಕೋಟ್ಯಂತರ ಮಂದಿ ಬಡತನಕ್ಕೆ ಸಿಲುಕಿದರು. ಆರ್ಥಿಕತೆಯ ಹಿಮ್ಮುಖ ಚಲನೆ ಪ್ರಾರಂಭವಾಯಿತು.

ADVERTISEMENT

ಮಹಿಳೆಯ ಉದ್ಯೋಗ, ಶಿಕ್ಷಣಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ತಾಲಿಬಾನ್‌ ಸ್ವಲ್ಪ ಸಡಿಲಿಸಿದೆ. ಆದರೆ, ಇಂದಿಗೂ ಮಹಿಳೆಯ, ಹೆಣ್ಣುಮಕ್ಕಳ ಸ್ಥಿತಿ ಹಾಗೆಯೇ ಇದೆ. ಸಾರ್ವಜನಿಕವಾಗಿ ಓಡಾಡಬೇಕೆಂದರೆ, ಈಗಲೂ ಮಹಿಳೆಯರು ಅಡಿಯಿಂದ ಮುಡಿಯ ವರೆಗೆ ಬುರ್ಖಾ ಧರಿಸಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಇಚ್ಛಿಸುವ ಕುಟುಂಬವು, ಮನೆಯ ನೆಲಮಾಳಿಗೆಯಲ್ಲಿ ಶಾಲೆಗಳನ್ನು ತೆರೆಯಬೇಕಾಗಿದೆ.

ಜೀವ ಉಳಿಸಿಕೊಳ್ಳಲು, ಭಯ ಇಲ್ಲದ ಬದುಕು ಕಟ್ಟಿಕೊಳ್ಳಲು ಅಫ್ಗನ್ ಜನರು ಒಂದು ವರ್ಷದ ಹಿಂದೆ ವಿಮಾನ ನಿಲ್ದಾಣಗಳಿಗೆ ನುಗ್ಗಿದ್ದರು. ಆದರೆ, ಇಂದು ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆರಳಣಿಕೆಯಷ್ಟು ವಿಮಾನಗಳು ಬಂದು ಹೋಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.