ADVERTISEMENT

ಕಾಬೂಲ್‌ನಲ್ಲಿ ‘ಹೊಸ’ ಸಹಜ ಸ್ಥಿತಿ

ಏಜೆನ್ಸೀಸ್
Published 17 ಆಗಸ್ಟ್ 2021, 19:45 IST
Last Updated 17 ಆಗಸ್ಟ್ 2021, 19:45 IST
ತಾಲಿಬಾನಿಗಳು ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಅಲ್ಲಿನ ರಸ್ತೆಗಳು ವಾಹನ ಸಂಚಾರವಿಲ್ಲದೆ ಬಿಕೊ ಎನ್ನುತ್ತಿವೆ.
ತಾಲಿಬಾನಿಗಳು ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಅಲ್ಲಿನ ರಸ್ತೆಗಳು ವಾಹನ ಸಂಚಾರವಿಲ್ಲದೆ ಬಿಕೊ ಎನ್ನುತ್ತಿವೆ.   

ಕಾಬೂಲ್‌: ಅಫ್ಗಾನಿಸ್ತಾನದ ಅದರಲ್ಲೂ ವಿಶೇಷವಾಗಿ ರಾಜಧಾನಿ ಕಾಬೂಲ್‌ನ ಫ್ಯಾಷನ್‌ ಕಾಳಜಿಯ ಜನರು ಪಾಶ್ಚಿಮಾತ್ಯ ಶೈಲಿಯ ದಿರಿಸಿನ ಮೊರೆ ಹೋಗಿದ್ದರು. ಜೀವನಶೈಲಿಯಲ್ಲಿಯೂ ಪಶ್ಚಿಮದ ಪದ್ಧತಿಗಳು ಇಣುಕು ಹಾಕತೊಡಗಿದ್ದವು. ಈಗ ಅದು ಬದಲಾಗಿದೆ. ಜನರು ಸಾಂಪ್ರದಾಯಿಕವಾದ ಸಲ್ವಾರ್‌ ಕಮೀಜ್‌ ಮೊರೆ ಹೋಗಿದ್ದಾರೆ. ಬೀದಿಗಳಲ್ಲಿ ಮಹಿಳೆಯರ ಸುಳಿವೇ ಇಲ್ಲ.

‘ಭಯ ಎಲ್ಲರಲ್ಲಿಯೂ ಇದೆ’ ಎಂದು ಕೆಲ ದಿನಗಳ ಬಳಿಕ ಕಿರಾಣಿ ಅಂಗಡಿ ತೆರೆದಿರುವ ಅಂಗಡಿಯಾತ ಹೇಳಿದ್ದಾರೆ.

ಜೀವನ ಸಹಜ ಸ್ಥಿತಿಗೆ ನಿಧಾನಕ್ಕೆ ಮರಳುತ್ತಿದೆ. ಆದರೆ, ಇದು ಹೊಸ ರೀತಿಯ ಸಹಜ ಸ್ಥಿತಿ ಎಂಬುದು ಜನರಿಗೆ ಅರಿವಾಗಿದೆ. ಜನರು ಬಹಳ ಎಚ್ಚರಿಕೆಯಿಂದಲೇ ಹೊರಗೆ ಕಾಲಿರಿಸಿದ್ದಾರೆ. ಬಹಳಷ್ಟು ಮಂದಿಗೆ ಕಳೆದ 20 ವರ್ಷಗಳು ಕನಸಿನಂತೆ ಕಳೆದುಹೋಗಿವೆ.

ADVERTISEMENT

ಜನರ ಜೀವನಶೈಲಿ ಯಾವ ರೀತಿ ಇರಬೇಕು ಎಂದು ತಾಲಿಬಾನ್‌ ಆದೇಶವನ್ನೇನೂ ಮಾಡಿಲ್ಲ. ಆದರೆ, ಜನರೇ ತಮ್ಮ ಹಿಂದಿನ ಶೈಲಿಯನ್ನು ಮರೆತು ತಾಲಿಬಾನ್‌ಗೆ ಅನುಗುಣವಾದ ಶೈಲಿಗೆ ಮರಳಿದ್ದಾರೆ.

ಇರಾನ್‌, ಟರ್ಕಿಗೆ ಆತಂಕ:
ಅಫ್ಗಾನಿಸ್ತಾನದ ಆಳ್ವಿಕೆಯು ತಾಲಿಬಾನ್‌ ಕೈಗೆ ಸಿಕ್ಕಿದ್ದು ಸುತ್ತಲಿನ ದೇಶಗಳಾದ ಇರಾನ್‌ ಮತ್ತು ಟರ್ಕಿಯ ಕಳವಳಕ್ಕೆ ಕಾರಣವಾಗಿದೆ. ತಾಲಿಬಾನ್‌ ಆಳ್ವಿಕೆಯಿಂದ ಕಂಗೆಡುವ ಜನರು ಈ ಎರಡೂ ದೇಶಗಳಿಗೆ ನುಗ್ಗುವ ಸಾಧ್ಯತೆ ಹೆಚ್ಚು. ಎರಡೂ ದೇಶಗಳಲ್ಲಿ ಕೊರೊನಾ ಸಾಂಕ್ರಾಮಿಕವು ತೀವ್ರವಾಗಿದೆ. ಈ ಸಂದರ್ಭದಲ್ಲಿ ಹೊರಗಿನ ಜನರು ನುಗ್ಗುವುದು ಇನ್ನಷ್ಟು ಅಪಾಯಕ್ಕೆ ಕಾರಣ ಆಗಬಹುದು ಎಂಬ ಆತಂಕವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.