ADVERTISEMENT

ಆ.31ರ ಗಡುವು ಖಚಿತಪಡಿಸಿದ ಬೈಡನ್; ದೇಶ ಬಿಡಲು ಹಾತೊರೆಯುತ್ತಿರುವ ಆಫ್ಗನ್ನರು

ಏಜೆನ್ಸೀಸ್
Published 26 ಆಗಸ್ಟ್ 2021, 1:10 IST
Last Updated 26 ಆಗಸ್ಟ್ 2021, 1:10 IST
ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಲು ಹೊರಗಡೆ ಕಾಯುತ್ತಿರುವ ಜನಸ್ತೋಮ
ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಲು ಹೊರಗಡೆ ಕಾಯುತ್ತಿರುವ ಜನಸ್ತೋಮ   

ಕಾಬೂಲ್‌: ಅಫ್ಗಾನಿಸ್ತಾನದಿಂದ ತೆರವು ಕಾರ್ಯಾಚರಣೆ ಮುಂದಿನ ವಾರ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಬುಧವಾರ ಹೇಳಿದ್ದಾರೆ. ಇದರಿಂದಾಗಿ, ಅಫ್ಗಾನಿಸ್ತಾನದಿಂದ ತಪ್ಪಿಸಿಕೊಳ್ಳಲು ಅಲ್ಲಿನ ಜನರ ಧಾವಂತ ಹೆಚ್ಚಾಗಿದೆ.

ಅಫ್ಗಾನಿಸ್ತಾನವು ತಾಲಿಬಾನ್‌ ವಶವಾದ ಇದೇ 14ರ ನಂತರದಲ್ಲಿ 82 ಸಾವಿರಕ್ಕೂ ಹೆಚ್ಚು ಜನರನ್ನು ತೆರವು ಮಾಡಲಾಗಿದೆ. ತಾಲಿಬಾನ್‌ ಆಳ್ವಿಕೆಯಲ್ಲಿ ದಮನ ಅಥವಾ ಕಿರುಕುಳಕ್ಕೆ ಒಳಗಾಗಬಹುದು ಎಂಬ ಭೀತಿ ಇರುವ ಸಾವಿರಾರು ಜನರು ಕಾಬೂಲ್‌ ವಿಮಾನ ನಿಲ್ದಾಣದ ಹೊರಗೆ ಜಮಾಯಿಸುವುದು ಮುಂದುವರಿದಿದೆ.

ಸಂಪೂರ್ಣ ತೆರವಿಗೆ ನಿಗದಿ ಮಾಡಲಾಗಿರುವ ಇದೇ 31ರ ಗಡುವನ್ನು ಪಾಲಿಸಲಾಗುವುದು ಎಂದು ಬೈಡನ್‌ ಅವರು ದೃಢಪಡಿಸಿದ್ದಾರೆ. ಅಫ್ಗಾನಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗಬಹುದಾದ ಎಲ್ಲ ಜನರ ತೆರವು ಸಾಧ್ಯವಾಗಲಿಕ್ಕಿಲ್ಲ ಎಂದು ಐರೋಪ್ಯ ಒಕ್ಕೂಟದದೇಶಗಳು ಎಚ್ಚರಿಕೆ ನೀಡಿದ್ದರೂ ಗಡುವಿಗೆ ಅಂಟಿಕೊಳ್ಳಲು ಬೈಡನ್ ನಿರ್ಧರಿಸಿದ್ದಾರೆ.

ADVERTISEMENT

‘ಎಷ್ಟು ಬೇಗ ಪೂರ್ಣಗೊಳಿಸುತ್ತೇವೆಯೋ ಅಷ್ಟು ಒಳ್ಳೆಯದು. ಒಂದೊಂದು ದಿನ ಕಳೆದಂತೆಯೂ ನಮ್ಮ ಪಡೆಗಳಿಗೆ ಅಪಾಯ ಹೆಚ್ಚುತ್ತಲೇ ಹೋಗುತ್ತದೆ. ಈಗಿನ ವೇಗದಲ್ಲಿ ಹೋದರೆ 31ರ ಒಳಗೆ ತೆರವು ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಬೈಡನ್‌ ಹೇಳಿದ್ದಾರೆ.

ಆದರೆ, ತೆರವು ಕಾರ್ಯಾಚರಣೆಗೆ ಇರುವ ಅವಧಿಯು ಸೀಮಿತ ಆಗಿರುವುದರಿಂದ ಅಫ್ಗಾನಿಸ್ತಾನದಿಂದ ಹೊರ ಹೋಗಲು ಬಯಸುವ ಅಲ್ಲಿನ ಎಲ್ಲರ ತೆರವು ಸಾಧ್ಯವಾಗಲಿಕ್ಕಿಲ್ಲ. ಇದು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. 2001ರ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಇದ್ದ ತಾಲಿಬಾನ್‌ ಸರ್ಕಾರದ ರೀತಿಯಲ್ಲಿಯೇ ದಮನಕಾರಿ ನೀತಿ ಆರಂಭವಾಗಬಹುದು ಎಂಬ ಭೀತಿ ಜನರಲ್ಲಿ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.