
ಲಂಡನ್: ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಬೆಳವಣಿಗೆ ಮೇಲೆ ಹೇಗೆ ಪರಿಣಾಮ ಬೀರಲಿದೆ, ಉದ್ಯೋಗಾವಕಾಶಗಳನ್ನು ಹೇಗೆ ಸೃಷ್ಟಿಸಲಿದೆ, ಸಾರ್ವಜನಿಕ ಸೇವೆಗಳನ್ನು ಹೇಗೆ ಸುಧಾರಿಸಲಿದೆ ಮತ್ತು ಜಗತ್ತಿನಾದ್ಯಂತ ಜನರಿಗೆ ಯಾವ ರೀತಿ ಅನುಕೂಲ ಕಲ್ಪಿಸಲಿದೆ ಎಂಬುದರತ್ತ ಎಐ ಶೃಂಗದಲ್ಲಿ ಬ್ರಿಟನ್ ಗಮನಹರಿಸಲಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.
ದೆಹಲಿಯಲ್ಲಿ ಸೋಮವಾರದಿಂದ ಎಐ ಶೃಂಗಸಭೆ ಆರಂಭಗೊಂಡಿದ್ದು, ಉಪ ಪ್ರಧಾನಿ ಡೇವಿಡ್ ಲ್ಯಾಮಿ ಮತ್ತು ಎಐ ಸಚಿವ ಕನಿಷ್ಕಾ ನಾರಾಯಣ್ ನೇತೃತ್ವದ ಬ್ರಿಟನ್ ನಿಯೋಗವು ಭಾಗಿಯಾಗಿದೆ. ಜಗತ್ತಿನ ಮೂಲೆ ಮೂಲೆಯ ಜನರ ಜೀವನವನ್ನು ಎಐ ಹೇಗೆ ಸುಧಾರಿಸಬಹುದು ಎಂಬ ಬಗ್ಗೆ ಚರ್ಚೆಗೆ ಚಿಂತನೆ ನಡೆಸಿದೆ.
ಶೃಂಗಕ್ಕೂ ಮುನ್ನ ಮಾತನಾಡಿದ ಲ್ಯಾಮಿ ಅವರು, ‘ಈ ಶೃಂಗಸಭೆಯು ಮಹತ್ವದ್ದಾಗಿದ್ದು, ಎಐ ತಂತ್ರಜ್ಞಾನವನ್ನು ಸದುಪಯೋಗಿಸಿಕೊಂಡು, ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಹೇಗೆ ಕೆಲಸ ಮಾಡಬಹುದು ಎಂದು ತೀರ್ಮಾನಿಸಬಹುದಾಗಿದೆ’ ಎಂದರು.
ವಿಜ್ಞಾನ, ನಾವೀನ್ಯ ಮತ್ತು ತಂತ್ರಜ್ಞಾನ ಇಲಾಖೆಯು, ‘ಭಾರತ–ಬ್ರಿಟನ್ ಸ್ವಾಭಾವಿಕ ತಂತ್ರಜ್ಞಾನ ಪಾಲುದಾರ ರಾಷ್ಟ್ರಗಳು. ಇನ್ಫೊಸಿಸ್, ಟಾಟಾ ಕನ್ಸಲ್‌ಟೆನ್ಸಿ ಸರ್ವೀಸಸ್ ಮತ್ತು ವಿಪ್ರೊದಂತ ದೈತ್ಯ ಸಂಸ್ಥೆಗಳು ಬ್ರಿಟನ್‌ನಲ್ಲೂ ತಮ್ಮ ಕಬಂಧಬಾಹುವನ್ನು ಚಾಚಿವೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.