ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ತಾನು ಅಧಿಕಾರ ವಹಿಸಿಕೊಳ್ಳುವ ದಿನದೊಳಗೆ ಬಿಡುಗಡೆ ಮಾಡದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
2023ರ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಒತ್ತೆ ಇರಿಸಿಕೊಂಡ ಕೆಲವು ಅಮೆರಿಕನ್ನರು ಸೇರಿ ಸುಮಾರು 100ಕ್ಕೂ ಹೆಚ್ಚು ಒತ್ತೆಯಾಳುಗಳು ಇನ್ನೂ ಬಿಡುಗಡೆಯಾಗಿಲ್ಲ. ಇವರಲ್ಲಿ ಅನೇಕರು ಹಮಾಸ್ ವಶದಲ್ಲಿರುವಾಗಲೇ ಮೃತಪಟ್ಟಿರುವ ಶಂಕೆ ಇದೆ.
‘ನಾನು ಸಂಧಾನಕ್ಕೆ ಯಾವುದೇ ಅಡ್ಡಿಪಡಿಸುವುದಿಲ್ಲ. ಆದರೆ, ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವುದರೊಳಗೆ ಒತ್ತೆಯಲ್ಲಿರುವವರೆಲ್ಲರೂ ಬಿಡುಗಡೆಯಾಗಬೇಕು. ಒಂದು ವೇಳೆ, ಒತ್ತೆಯಾಳುಗಳು ಸುರಕ್ಷಿತವಾಗಿ ಮರಳದಿದ್ದರೆ ಪಶ್ಚಿಮ ಏಷ್ಯಾದಲ್ಲಿ ದೊಡ್ಡ ನರಕವೇ ಸೃಷ್ಟಿಯಾಗುತ್ತದೆ’ ಎಂದು ಟ್ರಂಪ್, ಫ್ಲಾರಿಡಾದ ಮಾರ್-ಎ-ಲಾಗೋದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಮೆರಿಕದ ಒತ್ತೆಯಾಳುಗಳ ಬಿಡುಗಡೆ ಕುರಿತು ಹಮಾಸ್ ಜತೆಗಿನ ಮಾತುಕತೆಯ ಸ್ಥಿತಿಗತಿ ಕುರಿತ ಪ್ರಶ್ನೆಗೆ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ ಇದೇ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹಮಾಸ್ ಮತ್ತು ಇಸ್ರೇಲ್ ನಡುವೆ ಕತಾರ್‌ನಲ್ಲಿ ಮಾತುಕತೆಗಳು ನಡೆಯುತ್ತಿವೆ. ಗಾಜಾದಲ್ಲಿ 34 ಒತ್ತೆಯಾಳುಗಳು ಇರುವುದಾಗಿ ಹಮಾಸ್ ಈ ವಾರ ಹೇಳಿದೆ. ಈ ಒತ್ತೆಯಾಳುಗಳಲ್ಲಿ ದ್ವಿಪೌರತ್ವ ಹೊಂದಿರುವ ಇಬ್ಬರು ಅಮೆರಿಕನ್ನರು ಇದ್ದಾರೆ. ಇವರನ್ನು ಕದನ ವಿರಾಮ ಒಪ್ಪಂದದಡಿ ಬಿಡುಗಡೆ ಮಾಡಲು ಹಮಾಸ್ ಸಿದ್ಧವಾಗಿದೆ ಎಂದು ನ್ಯಾಷನಲ್ ಪಬ್ಲಿಕ್ ರೇಡಿಯೊ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.