ADVERTISEMENT

ಬೆಂಗಳೂರು ಸಂಸ್ಥೆಗೆ 1.2 ಶತಕೋಟಿ ಡಾಲರ್ ಪರಿಹಾರ: ಅಮೆರಿಕ ಕೋರ್ಟ್ ಆದೇಶ

ಒಪ್ಪಂದ ಉಲ್ಲಂಘಿಸಿದ ಇಸ್ರೋದ ಅಂಗಸಂಸ್ಥೆ

ಪಿಟಿಐ
Published 30 ಅಕ್ಟೋಬರ್ 2020, 1:52 IST
Last Updated 30 ಅಕ್ಟೋಬರ್ 2020, 1:52 IST
ಇಸ್ರೋ (ಸಂಗ್ರಹ ಚಿತ್ರ)
ಇಸ್ರೋ (ಸಂಗ್ರಹ ಚಿತ್ರ)   

ವಾಷಿಂಗ್‌ಟನ್: ಬೆಂಗಳೂರು ಮೂಲದ ಸ್ಟಾರ್ಟಪ್ ದೇವಾಸ್ ಮಲ್ಟಿಮೀಡಿಯಾದೊಂದಿಗೆ ಮಾಡಿಕೊಂಡಿದ್ದ ಉಪಗ್ರಹ ಒಪ್ಪಂದ ರದ್ದುಪಡಿಸಿದ್ದಕ್ಕಾಗಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯ ಘಟಕ ಆಂಟ್ರಿಕ್ಸ್‌ ಕಾರ್ಪೊರೇಷನ್‌ 1.2 ಶತಕೋಟಿ ಡಾಲರ್‌ ಪರಿಹಾರ ನೀಡಬೇಕು ಎಂದು ಅಮೆರಿಕದ ನ್ಯಾಯಾಲಯ ಸೂಚಿಸಿದೆ.

ಜನವರಿ 2005ರಲ್ಲಿ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಆಂಟ್ರಿಕ್ಸ್‌ ಕಂಪನಿಯು ದೇವಾಸ್‌ಗಾಗಿ 70 ಮೆಗಾಹರ್ಟ್ಸ್ ಎಸ್‌-ಬ್ಯಾಂಡ್‌ ತರಂಗಾಂತರದ ಎರಡು ಉಪಗ್ರಹಗಳನ್ನು ನಿರ್ಮಿಸಿ, ಉಡಾವಣೆ ಮಾಡಿ, ಕಾರ್ಯಾಚರಣೆ ಮಾಡಬೇಕಿತ್ತು. ಈ ಉಪಗ್ರಹಗಳನ್ನು ದೇವಾಸ್‌ ಭಾರತದಾದ್ಯಂತ ಸಂವಹನ ಸೇವೆ ಒದಗಿಸಲು ಬಳಸುವ ಉದ್ದೇಶ ಹೊಂದಿತ್ತು.

ಫೆಬ್ರುವರಿ 2011ರಲ್ಲಿ ಆಂಟ್ರಿಕ್ಸ್‌ ಈ ಒಪ್ಪಂದವನ್ನು ರದ್ದುಪಡಿಸಿತ್ತು. ಈ ನಿರ್ಧಾರ ಪ್ರಶ್ನಿಸಿ ದೇವಾಸ್‌ ಕಂಪನಿಯು ಭಾರತದ ಹಲವು ನ್ಯಾಯಿಕ ಸಂಸ್ಥೆಗಳಲ್ಲಿ ಪ್ರಕರಣ ದಾಖಲಿಸಿತ್ತು. ಈ ಕುರಿತು ಟ್ರಿಬ್ಯುನಲ್ ರಚಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು.

ADVERTISEMENT

ಅಕ್ಟೋಬರ್‌ 27ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದ ಅಮೆರಿಕದ ವಾಷಿಂಗ್‌ಟನ್ ಪಶ್ಚಿಮ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಥಾಮಸ್‌ ಎಸ್.ಝಿಲ್ಲಿ, 'ದೇವಾಸ್‌ಗೆ ಅಂಟ್ರಿಕ್ಸ್‌ ಕಾರ್ಪೊರೇಷನ್ 56.5 ಕೋಟಿ ಡಾಲರ್ ಪರಿಹಾರ ನೀಡಬೇಕು. ಇದಕ್ಕೆ ಈವರೆಗಿನ ಬಡ್ಡಿ ಸೇರಿಸಿದರೆ ಒಟ್ಟು ಮೊತ್ತು 1.2 ಶತಕೋಟಿ ಡಾಲರ್‌ ಆಗುತ್ತದೆ' ಎಂದು ಹೇಳಿದ್ದರು.

'ದೇವಾಸ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸಿದ ಅಂಟ್ರಿಕ್ಸ್‌ನ ಕ್ರಮವು ಸರಿಯಲ್ಲ ಎಂದು ಮೂರು ಪ್ರತ್ಯೇಕ ಅಂತರರಾಷ್ಟ್ರೀಯ ಟ್ರಿಬ್ಯುನಲ್‌ಗಳು ಮತ್ತು ಒಂಭತ್ತು ಆಬ್ರಿಟ್ರೇಟರ್‌ಗಳು ಅಭಿಪ್ರಾಯಪಟ್ಟಿದ್ದರು' ಎಂದು ದೇವಾಸ್‌ ಅಮೆರಿಕದ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿತ್ತು.

'ಅಮೆರಿಕದ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಲು ಅಧಿಕಾರ ಹೊಂದಿಲ್ಲ' ಎಂದು ಅಂಟ್ರಿಕ್ಸ್‌ ವಾದಿಸಿತ್ತು. ಆದರೆ ಅಮೆರಿಕದ ಸೀಟಲ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ದೇವಾಸ್‌, ಅಮೆರಿಕದಾದ್ಯಂತ ಸೇವೆ ಒದಗಿಸುತ್ತಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆ ನಡೆಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.