
ವಾಷಿಂಗ್ಟನ್: ಇರಾನ್, ಇರಾಕ್, ಜೋರ್ಡಾನ್, ಲೆಬನಾನ್ ಮತ್ತು ಇಸ್ರೇಲ್ ಸೇರಿದಂತೆ ಪಶ್ಚಿಮ ಏಷ್ಯಾದ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ತನ್ನೆಲ್ಲಾ ನಾಗರಿಕರು ತಕ್ಷಣವೇ ಆ ದೇಶಗಳನ್ನು ತೊರೆಯುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಸೋಮವಾರ ಸೂಚನೆ ನೀಡಿದೆ.
ಈ ಕುರಿತು ಅಮೆರಿಕದ ಕೌನ್ಸುಲರ್ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಮೋರಾ ನಮ್ದಾರ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಅಮೆರಿಕದ ಪ್ರಜೆಗಳು ಲಭ್ಯವಿರುವ ಯಾವುದೇ ವಾಣಿಜ್ಯ ಸಾರಿಗೆಯನ್ನು ಬಳಸಿಕೊಂಡು ತಕ್ಷಣವೇ ಹೊರಡಿ’ ಎಂದು ಅವರು ತಿಳಿಸಿದ್ದಾರೆ.
ಶನಿವಾರ ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ದಾಳಿ ನಡೆಸುವುದರೊಂದಿಗೆ ಆರಂಭವಾದ ಈ ಯುದ್ಧವು ಈಗ ಪ್ರಮುಖ ಪ್ರಾದೇಶಿಕ ಸಂಘರ್ಷವಾಗಿ ಮಾರ್ಪಟ್ಟಿದ್ದು, ನೆರೆಯ ಬಹುತೇಕ ರಾಷ್ಟ್ರಗಳಿಗೆ ಹರಡಿದೆ. ಈಗಾಗಲೇ ಹಲವು ವಿಮಾನಯಾನ ಸಂಸ್ಥೆಗಳು ಈ ಪ್ರದೇಶದಲ್ಲಿ ವಿಮಾನ ಸೇವೆಗಳನ್ನು ರದ್ದುಪಡಿಸಿವೆ.
ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. ಪ್ರತಿದಾಳಿ ತೀವ್ರಗೊಳಿಸಿರುವ ಇರಾನ್, ಕುವೈತ್, ಯುಎಇ, ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ.
ಈ ನಡುವೆ, ನಾಲ್ಕೈದು ವಾರಗಳ ವರೆಗೆ ಯುದ್ಧ ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.