ADVERTISEMENT

Covid World Updat‌e| ಅಮೆರಿಕ, ಲ್ಯಾಟಿನ್‌ ಅಮೆರಿಕ ದೇಶಗಳಲ್ಲಿ ಕೊರೊನಾ ತಾಂಡವ

ಏಜೆನ್ಸೀಸ್
Published 11 ಜೂನ್ 2020, 17:32 IST
Last Updated 11 ಜೂನ್ 2020, 17:32 IST
ಬ್ರೆಜಿಲ್‌ನ ಸ್ಯಾಂಟ್ರೋ ಅಂಡ್ರೋದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಸೋಂಕಿತರೊಬ್ಬರು ಕುಟುಂಬಸ್ಥರೊಂದಿಗೆ ವಿಡಿಯೊ ಕಾಲ್‌ ಮೂಲಕ ಮಾತನಾಡುತ್ತಿರುವುದು.
ಬ್ರೆಜಿಲ್‌ನ ಸ್ಯಾಂಟ್ರೋ ಅಂಡ್ರೋದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಸೋಂಕಿತರೊಬ್ಬರು ಕುಟುಂಬಸ್ಥರೊಂದಿಗೆ ವಿಡಿಯೊ ಕಾಲ್‌ ಮೂಲಕ ಮಾತನಾಡುತ್ತಿರುವುದು.    

ವಾಷಿಂಗ್ಟನ್‌ ಡಿಸಿ:ಜಾನ್ಸ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಕೊರೊನಾವೈರಸ್‌ನಿಂದಾಗಿ ಜಗತ್ತಿನಾದ್ಯಂತ ಸಾವಿಗೀಡಾದವರ ಸಂಖ್ಯೆ 4,17,829 ಆಗಿದೆ.ಒಟ್ಟು ಪ್ರಕರಣಗಳ ಸಂಖ್ಯೆ 7426178 ಆಗಿದೆ.

ಕೊರೊನಾ ವೈರಸ್‌ ಅಮೆರಿಕ ಮತ್ತು ಲ್ಯಾಟಿನ್‌ ಅಮೆರಿಕ ಭೂ ಭಾಗವನ್ನು ಇನ್ನಿಲ್ಲದಂತೆ ಭಾದಿಸುತ್ತಿದೆ. ಒಂದೆಡೆ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷದ ಗಡಿ ದಾಟಿ ಹೋಗಿದ್ದರೆ, ಲ್ಯಾಟಿನ್‌ ಅಮೆರಿಕದ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ಗೆ ಈ ವರೆಗೆ 70 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 20 ಲಕ್ಷದ ಗಡಿ ದಾಟಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ. ಆದರೆ, ಕೋವಿಡ್‌ 19 ಟ್ರ್ಯಾಕರ್‌ ಜಾನ್‌ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ವೆಬ್‌ ಸೈಟ್‌ ಅಂಕಿ ಅಂಶಗಳ ಪ್ರಕಾರ ಸದ್ಯ ಅಮೆರಿಕದ ಸೋಂಕಿತರ ಸಂಖ್ಯೆ 19,99,392 ಆಗಿದೆ. ಅಲ್ಲಿ ಈ ವರೆಗೆ 1,12,878 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಇನ್ನು ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳಾದ ಬ್ರೆಜಿಲ್‌, ಮೆಕ್ಸಿಕೊ, ಚಿಲಿ, ಬೊಲಿವಿಯಾಗಳಲ್ಲೂ ಕೊರೊನಾ ವೈರಸ್‌ ತಾಂಡವವಾಡುತ್ತಿದೆ. ಬುಧವಾರದ ಹೊತ್ತಿಗೆ ದಕ್ಷಿಣ ಅಮೆರಿಕದ ರಾಷ್ಟ್ರಗಳಲ್ಲಿ ಮಹಾಮಾರಿಗೆ ಒಟ್ಟಾರೆ 70 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಂಕಿಅಂಶಗಳಿಂದ ಗೊತ್ತಾಗಿದೆ.

ಬ್ರೆಜಿಲ್‌ನಲ್ಲಿ 7,72,416 ಮಂದಿ ಸೋಂಕಿತರಿದ್ದರೆ, 40 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಮೆಕ್ಸಿಕೊದಲ್ಲಿ 1,29,184 ಮಂದಿ ಸೋಂಕಿತರಿದ್ದರೆ 15,357 ಮಂದಿ ಮೃತಪಟ್ಟಿದ್ದಾರೆ. ಚಿಲಿಯಲ್ಲಿ 1,48,456 ಸೋಂಕಿತರಿಂದ, 2,475 ಮಂದಿ ಸಾವಿಗೀಡಾಗಿದ್ದಾರೆ, ಅರ್ಜೆಂಟಿನಾದಲ್ಲಿ 25,987 ಸೋಂಕಿತರಿಂದ 735 ಮೃತರಾಗಿದ್ದಾರೆ. ಬೊಲಿವಿಯಾದಲ್ಲಿ 14,644 ಸೋಂಕಿತರಿದ್ದು, 487ಮಂದಿ ಸತ್ತಿದ್ದಾರೆ.

ಕೊರೊನಾ ನಿಗ್ರಹಿಸಿದ ಕ್ಯೂಬಾ

ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳ ಪೈಕಿ ಕ್ಯೂಬಾ ಕೊರೊನಾ ವಿರುದ್ಧ ಗಮನಾರ್ಹ ಸಾಧನೆ ಮಾಡಿದೆ. ಅಲ್ಲಿರುವುದು ಕೇವಲ 2,211 ಸೋಂಕಿತರಷ್ಟೇ. ಅಲ್ಲಿ ಸತ್ತವರ ಸಂಖ್ಯೆಯೂ ಅಚ್ಚರಿದಾಯಕ. ಈ ವರೆಗೆ ಅಲ್ಲಿ 88 ಮಂದಿ ಮಾತ್ರ ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ವೈರಸ್‌ ವಿರುದ್ಧ ಕ್ಯೂಬಾ ಕೈಗೊಂಡ ಕ್ರಮಗಳು ವಿಶ್ವದೆಲ್ಲೆಡೆ ಈಗಾಗಲೆ ಪ್ರಶಂಸೆಗೆ ಪಾತ್ರವಾಗಿವೆ.

ಗ್ವಾಟೆಮಾಲಕ್ಕೆ ಐಎಂಎಫ್‌ ನೆರವು

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ದಕ್ಷಿಣ ಅಮೆರಿಕ ರಾಷ್ಟ್ರ ಗ್ವಾಟೆಮಾಲಕ್ಕೆ ಕೊರೊನಾ ವಿರುದ್ಧ ಹೋರಾಡಲು 594 ಮಿಲಿಯನ್‌ ಡಾಲರ್‌ಗಳ ನೆರವು ಘೋಷಣೆ ಮಾಡಿದೆ.

ಅಚ್ಚರಿ ಮೂಡಿಸಿದೆ ರಷ್ಯಾ

ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 4,93,023 ಮಂದಿ ಸೋಂಕಿತರದಿದ್ದಾರೆ. ಈ ಸಂಖ್ಯೆಗೆ ಪ್ರತಿಯಾಗಿ ಅಲ್ಲಿ ಸಾವಿಗೀಡಾದವರು 6,350 ಮಂದಿ. ಆದರೆ, 2,91,588 ಸಂಖ್ಯೆ ಸೋಂಕಿತರನ್ನು ಹೊಂದಿರುವ ಬ್ರಿಟನ್‌ನಲ್ಲಿ 41,213 ಮಂದಿ ಮೃತಪಟ್ಟಿದ್ದಾರೆ, 276,583 ಸೋಂಕಿತರುವ ಭಾರತದಲ್ಲಿ 7,745 ಸಾವಿಗೀಡಾಗಿದ್ದಾರೆ. ಹೆಚ್ಚಿನ ಸೋಂಕಿದ್ದರೂ, ಕಡಿಮೆ ಮರಣ ದರ ಹೊಂದಿರುವ ರಾಷ್ಟ್ರಗಳ ಪೈಕಿ ರಷ್ಯಾ ಗಮನಾರ್ಹ.

ಚೀನಾದಲ್ಲಿ 11 ಹೊಸ ಪ್ರಕರಣ

ವೈರಾಣುವಿನ ಮೂಲ ಚೀನಾದಲ್ಲಿ ಜೂನ್‌ 10ರ ಹೊತ್ತಿಗೆ ಹೊಸ 11 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರೆಲ್ಲರೂ ಹೊರಗಿನಿಂದ ದೇಶಕ್ಕೆ ಬಂದವರು ಎಂದು ಚೀನಾ ತಿಳಿಸಿದೆ.

ಮರಳಿ ಲಾಕ್‌ಡೌನ್‌ ಮಾಡುವಂತೆ ಪಾಕ್‌ಗೆ ಸೂಚನೆ

ಪಾಕಿಸ್ತಾನದಲ್ಲಿ ಕೊರೊನಾ ವೈರಸ್‌ ತೀವ್ರಗತಿಯಲ್ಲಿ ಹಬ್ಬಲು ಆರಂಭಿಸಿದೆ. ಅಲ್ಲಿ ದಿನವೊಂದಕ್ಕೆ 5 ಸಾವಿರಕ್ಕಿಂತಲೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಅಲ್ಲಿ ಮರಳಿ ಲಾಕ್‌ಡೌನ್‌ ಮಾಡಬೇಕು ಎಂದು ವಿಶ್ವಸಂಸ್ಥೆ ಹೇಳಿದೆ. ಸದ್ಯ ಪಾಕಿಸ್ತಾನದಲ್ಲಿ 1,13,702 ಮಂದಿ ಸೋಂಕಿತರಿದ್ದು, 2,255 ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.