ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್, ಲಿಯೊ14
ವ್ಯಾಟಿಕನ್ ಸಿಟಿ: ಅಮೆರಿಕದ ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ಅವರು ರೋಮನ್ ಕ್ಯಾಥೋಲಿಕ್ ಚರ್ಚ್‌ನ ನೂತನ ಪೋಪ್ ಆಗಿ ಗುರುವಾರ ಆಯ್ಕೆಯಾಗಿದ್ದಾರೆ.
69 ವರ್ಷದ ಅವರು ಇನ್ನು ಮುಂದೆ ‘ಲಿಯೊ 14’ ಎಂಬ ಹೆಸರಿನಿಂದ ಕರೆಸಿಕೊಳ್ಳಲಿದ್ದಾರೆ. ಕ್ಯಾಥೋಲಿಕ್ ಚರ್ಚ್‌ನ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಅಮೆರಿಕದ ಬಿಷಪ್‌ವೊಬ್ಬರು ಈ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಇದೇ ಮೊದಲು.
1955ರ ಸೆಪ್ಟೆಂಬರ್ 14ರಂದು ಷಿಕಾಗೊದಲ್ಲಿ ಜನಿಸಿದ ರಾಬರ್ಟ್ ಫ್ರಾನ್ಸಿಸ್ ಅವರು ಪೆರು ದೇಶದಲ್ಲಿ ಎರಡು ದಶಕ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಬಿಷಪ್ ಆಗಿಯೂ ಕಾರ್ಯನಿರ್ವಹಿಸಿದ್ದರು. 2023ರಲ್ಲಿ ಅವರನ್ನು ವ್ಯಾಟಿಕನ್‌ನ ಕಾರ್ಡಿನಲ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು.
ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಸೇರಿದ್ದ ಜನರನ್ನುದ್ದೇಶಿಸಿ ತಮ್ಮ ಚೊಚ್ಚಲ ಸಂದೇಶ ನೀಡಿದ ಅವರು, ‘ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಪರಸ್ಪರ ಕೈಜೋಡಿಸಬೇಕು’ ಎಂದು ಕರೆ ನೀಡಿದರು.
‘ಸಂವಾದ, ಮಾತುಕತೆಗಳ ಮೂಲಕ ಸೇತುವೆ ನಿರ್ಮಿಸಿ ಎಲ್ಲರೂ ಪರಸ್ಪರ ಹತ್ತಿರವಾಗಬೇಕು. ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಲಿ’ ಎಂದು ಹೇಳಿದರು.
ಪೋಪ್ ಆಯ್ಕೆ ಅಂತಿಮಗೊಳ್ಳುತ್ತಿದ್ದಂತೆಯೇ ಇಲ್ಲಿನ ಸಿಸ್ಟೈನ್ ಚಾಪೆಲ್‌ನ ಚರ್ಚ್ ಚಿಮಣಿಯಿಂದ ಬಿಳಿ ಬಣ್ಣದ ಹೊಗೆ ಬಿಡಲಾಯಿತು. ಬಿಳಿ ಬಣ್ಣದ ಹೊಗೆ ಕಂಡ ಕೂಡಲೇ, ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಸೇರಿದ್ದ ಜನರು ಹರ್ಷೋದ್ಗಾರ, ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದರು.
ನೂತನ ಪೋಪ್ ಆಯ್ಕೆಯನ್ನು ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಿಂದ ಘೋಷಿಸಲಾಯಿತು. ವಿಶ್ವದ ನಾನಾ ದೇಶಗಳನ್ನು ಪ್ರತಿನಿಧಿಸುವ 133 ಕಾರ್ಡಿನಲ್‌ಗಳು ನೂತನ ಪೋಪ್ ಅವರನ್ನು ಆಯ್ಕೆ ಮಾಡಿದರು.
ಪೋಪ್ ಫ್ರಾನ್ಸಿಸ್ ಅವರು ಏಪ್ರಿಲ್ 21ರಂದು ನಿಧನರಾಗಿದ್ದರು. ನೂತನ ಪೋಪ್ ಆಯ್ಕೆಗೆ ಬುಧವಾರ ಮತದಾನ ಪ್ರಕ್ರಿಯೆ ಆರಂಭವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.