ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೈಕಿ ಮ್ಯಾಡಿಸನ್
ಲಾಸ್ ಏಂಜಲೀಸ್: ಲೈಂಗಿಕ ಕಾರ್ಯಕರ್ತೆಯೊಬ್ಬಳು ರಷ್ಯಾದ ಶ್ರೀಮಂತ ವ್ಯಕ್ತಿಯ ಮಗನನ್ನು ವಿವಾಹವಾದ ನಂತರ ನಡೆಯುವ ದುರಂತದ ಬದುಕಿನ ಕಥಾ ಹಂದರವನ್ನು ಒಳಗೊಂಡಿರುವ ‘ಅನೋರಾ’ ಚಿತ್ರವು ಅತ್ಯುತ್ತಮ ಚಲನಚಿತ್ರ ಸೇರಿದಂತೆ ಐದು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಅಮೆರಿಕದ ಸೀನ್ ಬೇಕರ್ ನಿರ್ದೇಶನದ ಕಡಿಮೆ ಬಜೆಟ್‌ನಲ್ಲಿ 60 ಲಕ್ಷ ಡಾಲರ್ (₹ 52.38 ಕೋಟಿ) ‘ಅನೋರಾ’ ಸಿನಿಮಾವು ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ, ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ಚಿತ್ರ ಸಂಕಲನ ವಿಭಾಗಗಳಲ್ಲೂ 97ನೇ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಅನೋರಾಗೆ, ‘ಕಾನ್‌ಕ್ಲೇವ್’ ಮತ್ತು ‘ದಿ ಬ್ರೂಟಲಿಸ್ಟ್’ ಚಿತ್ರಗಳು ತೀವ್ರ ಪೈಪೋಟಿ ನೀಡಿದವು. ಒಟ್ಟು ಒಂಬತ್ತು ಸಿನಿಮಾಗಳು ಅಂತಿಮ ಸುತ್ತಿನಲ್ಲಿ ಪ್ರತಿಸ್ಪರ್ಧೆ ಒಡ್ಡಿದ್ದವು.
ಹಾಲಿವುಡ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
‘ದಿ ಬ್ರೂಟಲಿಸ್ಟ್’ ಚಿತ್ರದ ನಟ ಆ್ಯಡ್ರಿಯನ್ ಬ್ರಾಡಿ ಅತ್ಯುತ್ತಮ ನಟ ಹಾಗೂ ‘ಅನೋರಾ’ದ ನಟಿ ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
‘ನನ್ನ ಕನಸು ನನಸಾಗಿದೆ. ನಾನು ಲಾಸ್ ಏಂಜಲೀಸ್‌ನಲ್ಲಿ ಬೆಳೆದವಳು. ಆದರೆ ಹಾಲಿವುಡ್ ನನ್ನಿಂದ ಯಾವಾಗಲೂ ತುಂಬ ದೂರವಿದೆ ಎಂದು ಭಾವಿಸಿದ್ದೆ. ಆದರೆ ಇಂದು ನಾನು ಇಲ್ಲೇ ನಿಂತಿದ್ದೇನೆ’ ಎಂದು ಮ್ಯಾಡಿಸನ್ ಸುದ್ದಿಗಾರರ ಬಳಿ ಸಂತಸ ಹಂಚಿಕೊಂಡರು.
‘ಅನೋರಾ’ದ ನಿರ್ದೇಶಕ ಸೀನ್ ಬೇಕರ್ ಅವರು ವೈಯಕ್ತಿಕವಾಗಿ ನಾಲ್ಕು ಆಸ್ಕರ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಅವರು 1954ರಲ್ಲಿ ನಾಲ್ಕು ವಿಭಿನ್ನ ಚಿತ್ರಗಳಿಗೆ ಪ್ರಶಸ್ತಿ ಪಡೆದಿದ್ದ ವಾಲ್ಟ್ ಡಿಸ್ನಿ ಅವರ ದಾಖಲೆ ಸರಿಗಟ್ಟಿದರು.
‘ನಿಜವಾದ ಸ್ವತಂತ್ರ ಸಿನಿಮಾ ಗುರುತಿಸಿದ್ದಕ್ಕಾಗಿ ಅಕಾಡೆಮಿಗೆ ಧನ್ಯವಾದ ಅರ್ಪಿಸುತ್ತೇನೆ. ಸ್ವತಂತ್ರ ಚಿತ್ರ ಚಿರಾಯುವಾಗಲಿ’ ಎಂದು ಬೇಕರ್ ಪ್ರತಿಕ್ರಿಯಿಸಿದರು.
ಅತ್ಯುತ್ತಮ ಚಿತ್ರ: ಅನೋರಾ
ಅತ್ಯುತ್ತಮ ನಿರ್ದೇಶಕ: ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ನಟ: ಆ್ಯಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್)
ಅತ್ಯುತ್ತಮ ನಟಿ: ಮೈಕಿ ಮ್ಯಾಡಿಸನ್ (ಅನೋರಾ)
ಅತ್ಯುತ್ತಮ ಪೋಷಕ ನಟ: ಕೀರನ್ ಕುಲ್ಕಿನ್ (ಎ ರಿಯಲ್ ಪೇನ್)
ಅತ್ಯುತ್ತಮ ಪೋಷಕ ನಟಿ: ಜೋ ಸಲ್ಡಾನಾ (ಎಮಿಲಿಯಾ ಪೆರೆಜ್)
ಅತ್ಯುತ್ತಮ ಮೂಲ ಚಿತ್ರಕಥೆ: ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ರೂಪಾಂತರ ಚಿತ್ರಕಥೆ : ಪೀಟರ್ ಸ್ಟ್ರಾಘನ್ (ಕಾನ್‌ಕ್ಲೇವ್)
ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ: ಐ ಆ್ಯಮ್ ಸ್ಟಿಲ್ ಹಿಯರ್ (ಬ್ರೆಜಿಲ್)
ಅತ್ಯುತ್ತಮ ಅನಿಮೇಟೆಡ್ ಚಿತ್ರ: ಫ್ಲೊ
ಅತ್ಯುತ್ತಮ ಸಾಕ್ಷ್ಯಚಿತ್ರ: ನೋ ಅದರ್ ಲ್ಯಾಂಡ್
ಅತ್ಯುತ್ತಮ ಚಿತ್ರ ಸಂಕಲನ: ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ವಸ್ತು ವಿನ್ಯಾಸ: ಪೌಲ್ ಟಾಜ್‌ವೆಲ್ (ವಿಕೆಡ್)
ಅತ್ಯುತ್ತಮ ನಿರ್ಮಾಣ ವಿನ್ಯಾಸ: ನಾಥನ್ ಕ್ರೌಲಿ ಮತ್ತು ಲೀ ಸ್ಯಾಂಡರ್ಸ್ (ವಿಕೆಡ್)
ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ: ದಿ ಸಬ್‌ಸ್ಟ್ಯಾನ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.