ADVERTISEMENT

‘ಪ್ಯಾರಾಸೈಟ್‌ ನಿರೋಧಕ ಔಷಧ ಕೋವಿಡ್‌–19ಗೆ ಪರಿಣಾಮಕಾರಿ’

ಪಿಟಿಐ
Published 5 ಏಪ್ರಿಲ್ 2020, 2:26 IST
Last Updated 5 ಏಪ್ರಿಲ್ 2020, 2:26 IST
   

ಮೆಲ್ಬರ್ನ್: ವಿಶ್ವದಾದ್ಯಂತ ಸದ್ಯ ಲಭ್ಯವಿರುವ ಪರಾವಲಂಬಿ ನಿರೋಧಕ ಔಷಧಿ (ಆ್ಯಂಟಿ ಪ್ಯಾರಾಸೈಟ್‌ ಡ್ರಗ್‌) ಕೊರೊನಾ ವೈರಾಣುಗಳನ್ನು 48 ಗಂಟೆಗಳಲ್ಲಿ ನಾಶಪಡಿಸಲಿದೆ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ಗೊತ್ತಾಗಿದೆ. ಪ್ರಯೋಗ ಆರಂಭಿಕ ಹಂತದಲ್ಲಿದೆ. ಅಂತಿಮವಾಗಿ ಕೋವಿಡ್–19 ಚಿಕಿತ್ಸೆಗೆ ನೆರವಾಗಲಿದೆ ಎಂದು ಆಶಿಸಲಾಗಿದೆ.

‘ಇವೆರ್‌ಮೆಕ್ಟಿನ್‌’ ಎಂಬ ಔಷಧವು ‘ಸಾರ್ಸ್‌– ಕೊರೊನಾ–2’ ವೈರಾಣುಗಳ ಬೆಳವಣಿಗೆಯನ್ನು 48 ಗಂಟೆಗಳಲ್ಲಿ ತಡೆಯುವಲ್ಲಿ ಯಶಸ್ವಿಯಾಗಿರುವುದು ಪ್ರಯೋಗಾಲಯ ಪರೀಕ್ಷೆಯಿಂದ ಗೊತ್ತಾಗಿದೆ ಎಂದುಆ್ಯಂಟಿ ವೈರಲ್ ರೀಸರ್ಚ್‌ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ವರದಿ ತಿಳಿಸಿದೆ.

ಒಂದು ಡೋಸ್‌ ಪ್ರಮಾಣದ ಈ ಔಷಧ ವೈರಾಣುಗಳ ಬೆಳವಣಿಗೆಯನ್ನು ಮೂಲದಲ್ಲಿಯೇ ನಾಶಪಡಿಸಲಿದೆ ಎಂಬುದು ತಿಳಿದು ಬಂದಿದೆ. 24 ಗಂಟೆಗಳಲ್ಲಿ ವೈರಾಣುಗಳ ಬೆಳವಣಿಗೆ ಇಳಿಮುಖವಾಗಲಿದೆ ಎಂದು ಆಸ್ಟ್ರೇಲಿಯದ ಮೊನಾಶ್‌ ಯೂನಿವರ್ಸಿಟಿಯ ಕೈಲೀ ವಾಗ್‌ಸ್ಟಾಫ್‌ ಪ್ರಕಟಿಸಿರುವ ವರದಿಯು ತಿಳಿಸಿದೆ.

ಸದ್ಯ, ಈ ಔಷಧದ ಪರೀಕ್ಷೆ ಪ್ರಯೋಗಾಲಯದಲ್ಲಿ ನಡೆದಿದೆ. ಮನುಷ್ಯರ ಮೇಲೆ ಇನ್ನೂ ಇದರ ಪ್ರಯೋಗ ಆಗಬೇಕಾಗಿದೆ ಎಂದೂ ವಾಗ್‌ಸ್ಟಾಫ್‌ ಹೇಳಿದ್ದಾರೆ.

‘ಕೊರೊಫ್ಲ್ಯೂ’ ಲಸಿಕೆ ಅಭಿವೃದ್ಧಿ

ಹೈದರಾಬಾದ್‌: ಕೋವಿಡ್‌–19ಗೆ ‘ಕೊರೊಫ್ಲ್ಯೂ’ ಎನ್ನುವ ಹೊಸ ಲಸಿಕೆ ಅಭಿವೃದ್ಧಿಪಡಿಸುತ್ತಿದ್ದು, ಪರೀಕ್ಷಾ ಹಂತದಲ್ಲಿದೆ.

ಅಮೆರಿಕದ ಮ್ಯಾಡಿಸನ್‌ನ ವಿಸ್ಕಾನ್‌ಸಿನ್‌ ವಿಶ್ವವಿದ್ಯಾಲಯ ಮತ್ತು ಫ್ಲ್ಯೂಜೆನ್‌ ಸಂಸ್ಥೆ ಹಾಗೂ ಹೈದರಾಬಾದ್‌ನ ಭಾರತ್ ಬಯೊಟೆಕ್‌ ಕಂಪನಿಗಳು ಈ ಲಸಿಕೆ ಅಭಿವೃದ್ಧಿಪಡಿಸುತ್ತಿವೆ

ವಿಶ್ವವಿದ್ಯಾಲಯದ ವೈರಾಣು ತಜ್ಞರು ಹಾಗೂ ಫ್ಲ್ಯೂಜೆನ್‌ ಸಹಸಂಸ್ಥಾಪಕರಾದ ಯೊಶಿಹಿರೊ ಕವಾಕೊ ಮತ್ತು ಗ್ಯಾಬ್ರಿಲ್‌ ನ್ಯುಮಾನ್‌ ಅವರು ನಡೆಸಿದ ಸಂಶೋಧನೆ ಆಧಾರದ ಮೇಲೆ ಈ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ.

ರೋಗ ನಿರೋಧಕ ಲಸಿಕೆ (ವಾಷಿಂಗ್ಟನ್‌ ವರದಿ): ಕೋವಿಡ್‌–19ಗೆ ಲಸಿಕೆ ಅಭಿವೃದ್ಧಿಪಡಿಸಿರುವ ಸಂಶೋಧಕರು ಇಲಿಗಳ ಮೇಲೆ ಯಶಸ್ವಿ ಪರೀಕ್ಷೆ ನಡೆಸಿದ್ದಾರೆ. ಈ ಲಸಿಕೆ ರೋಗ ನಿರೋಧಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.