ADVERTISEMENT

ವಿಡಿಯೊ ಕಾನ್ಫರೆನ್ಸ್‌ ಅವಾಂತರ| ಕಲಾಪದ ವೇಳೆ ಸಂಗಾತಿ ಎದೆಗೆ ಮುತ್ತಿಟ್ಟ ಸಂಸದ

ಏಜೆನ್ಸೀಸ್
Published 25 ಸೆಪ್ಟೆಂಬರ್ 2020, 3:47 IST
Last Updated 25 ಸೆಪ್ಟೆಂಬರ್ 2020, 3:47 IST
ವಿಡಿಯೊ ಕಾನ್ಫರೆನ್ಸ್‌ನಲ್ಲಿ ಸಂಗಾತಿಯೊಂದಿಗೆ ಸಂಸದ ಎಮಿಲಿಯೊ ಅಮೆರಿ
ವಿಡಿಯೊ ಕಾನ್ಫರೆನ್ಸ್‌ನಲ್ಲಿ ಸಂಗಾತಿಯೊಂದಿಗೆ ಸಂಸದ ಎಮಿಲಿಯೊ ಅಮೆರಿ   

ಬ್ಯೂನಸ್ ಐರಿಸ್ (ಅರ್ಜೆಂಟೀನಾ): ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯುತ್ತಿದ್ದ ಅರ್ಜೆಂಟಿನಾದ ಸಂಸತ್‌ ಕಲಾಪದ ವೇಳೆ ಸಂಸದರೊಬ್ಬರು ತಮ್ಮ ಸಂಗಾತಿಯ ಸ್ತನವನ್ನು ಚುಂಬಿಸಿದ್ದಾರೆ. ಕಲಾಪ ನಡೆಯುವ ವೇಳೆ ಸಂಸದ ತೋರಿದ ದುರ್ವರ್ತನೆ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಆದರೆ, ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಕೊರೊನಾ ವೈರಸ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅರ್ಜೆಂಟಿನಾದ ಸಂಸತ್‌ ಕಲಾಪ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯುತ್ತಿದೆ. ಸಂಸದರು ಮನೆಗಳಲ್ಲಿದ್ದೇ ಕಲಾಪದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯಾರೆಲ್ಲ ಸಂಸದರು ವಿಡಿಯೊ ಕಾನ್ಫರೆನ್ಸ್‌ಗೆ ಬಂದಿದ್ದಾರೆ ಎಂಬುದನ್ನು ತೋರಿಸಲು, ಅವರ ಭಾಷಣ ಕೇಳಲು ಸಂಸತ್‌ ಸಭಾಂಗಣದಲ್ಲಿ ಬೃಹತ್‌ ಟಿ.ವಿ ಪರದೆ ಅಳವಡಿಸಲಾಗಿದೆ.

ಗುರುವಾರದ ಕಲಾಪದ ವೇಳೆ ಸಂಸದರೊಬ್ಬರು ಭಾಷಣ ಮಾಡುತ್ತಿದ್ದರು. ಇತರೆಲ್ಲ ಸಂಸದರು ಕೇಳುತ್ತಿದ್ದರು. ಆಗ ಸಾಲ್ಟಾದ ಈಶಾನ್ಯ ಪ್ರಾಂತ್ಯದ ಸಂಸದ ಎಮಿಲಿಯೊ ಅಮೆರಿ (47), ಎಂಬುವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಕಲಾಪದಲ್ಲಿ ಪಾಲ್ಗೊಂಡಿದ್ದರು. ಅವರ ಪಕ್ಕದಲ್ಲಿ ಅವರ ಸಂಗಾತಿ ಇದ್ದದ್ದು ಟಿವಿ ಪರದೆಯಲ್ಲಿ ಕಾಣುತ್ತಿತ್ತು. ಏಕಾಏಕಿ ಅವರು ತಮ್ಮ ಸಂಗಾತಿಯ ಸ್ತನಗಳನ್ನು ಚುಂಬಿಸಿದ್ದಾರೆ. ಹೀಗಾಗಿ ಸಂಸತ್‌ ಕಲಾಪವನ್ನು ಸ್ಪೀಕರ್‌ ಸರ್ಗಿಯೊ ಮಾಸ್ಸಾ ಅರೆ ಕ್ಷಣ ನಿಲ್ಲಿಸಿದರು. ನಂತರ ಮುಂದೂಡಿದರು. ಅಲ್ಲದೆ, ಸಂಸದ ಅಮೆರಿ ಅವರನ್ನು ಐದು ದಿನಗಳ ಕಾಲ ಸಂಸತ್‌ನಿಂದ ಅಮಾನತು ಮಾಡಿದರು. ಸದ್ಯ ಅವರ ಖಾಸಗಿ ಕ್ಷಣ ಜಗಜ್ಜಾಹೀರಾಗಿದೆ.

ADVERTISEMENT

ಘಟನೆ ಕುರಿತು ನಂತರ ಪ್ರತಿಕ್ರಿಯಿಸಿರುವ ಸ್ಪೀಕರ್‌ ಮಾಸ್ಸಾ, ‘ವಿಡಿಯೊ ಕಾನ್ಫರೆನ್ಸ್‌ಗಳು ನಡೆಯುತ್ತಿರುವ ವೇಳೆ ಹಲವು ಮುಜುಗರದ ಘಟನೆಗಳು ನಡೆದಿವೆ. ಕೆಲವೊಬ್ಬರು ನಿದ್ರೆಗೆ ಜಾರಿದ್ದಾರೆ, ಕೆಲವೊಬ್ಬರು ವಿಡಿಯೊ ಕಾನ್ಫರೆನ್ಸ್‌ನಿಂದಲೇ ಮರೆಯಾಗಿದ್ದಾರೆ. ಆದರೆ ಇಂದಿನ ಘಟನೆ ಸಂಸತ್‌ನ ಎಲ್ಲೆಗಳನ್ನು ಮೀರಿದ ವರ್ತನೆಯಾಗಿದೆ,’ ಎಂದು ಬೇಸರ ವ್ಯಕ್ತಪಡಿಸಿದರು.

ಅಚಾತುರ್ಯದ ನಂತರ ಮಾತನಾಡಿರುವ ಸಂಸದ ಅಮೆರಿ, ‘ವಿಡಿಯೊ ಕಾನ್ಫರೆನ್ಸ್‌ಗೆ ನಾನು ಸಂಪರ್ಕಗೊಂಡಿರುವುದು ನನಗೆ ತಿಳಿಯದೇ ಹೋಯಿತು,’ ಎಂದಿದ್ದಾರೆ. ಅಲ್ಲದೆ, ಕ್ಷಮೆಯನ್ನೂ ಕೋರಿದ್ದಾರೆ.

‘ನನ್ನ ಪತ್ನಿಗೆ ಹತ್ತು ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆದಿತ್ತು. ಅದನ್ನು ನೋಡುವ ಭರದಲ್ಲಿ ನಾನು ಚುಂಬಿಸಿದ್ದೇನೆ,’ ಎಂದೂ ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.