ADVERTISEMENT

ಪಾಕ್‌ನಲ್ಲಿ ಸೇನೆ–ಪೊಲೀಸರ ಜಟಾಪಟಿ

ರಾಯಿಟರ್ಸ್
Published 21 ಅಕ್ಟೋಬರ್ 2020, 19:20 IST
Last Updated 21 ಅಕ್ಟೋಬರ್ 2020, 19:20 IST
ಸಫ್ದರ್‌ ಬಂಧನದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರ ಹೆಂಡತಿ ಮರಿಯಂ            –ಎಪಿ ಚಿತ್ರ
ಸಫ್ದರ್‌ ಬಂಧನದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರ ಹೆಂಡತಿ ಮರಿಯಂ –ಎಪಿ ಚಿತ್ರ   

ಕರಾಚಿ: ಸಿಂಧ್‌ ಪ್ರಾಂತ್ಯದ ಪೊಲೀಸ್‌ ಮುಖ್ಯಸ್ಥ ಮುಸ್ತಾಕ್‌ ಅಹ್ಮದ್‌ ಮಹರ್‌ ಅವರನ್ನು ಅರೆಸೇನಾ ಪಡೆಯ ಸಿಬ್ಬಂದಿ ಅಪಹರಿಸಿದ್ದಾರೆ ಎಂಬ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನ ಸೇನೆ ಆದೇಶಿಸಿದೆ.

ವಿರೋಧ ಪಕ್ಷದ ನಾಯಕನೊಬ್ಬನನ್ನು ಬಂಧಿಸುವ ಆದೇಶಕ್ಕೆ ಬಲವಂತವಾಗಿ ಸಹಿ ಹಾಕಿಸುವುದಕ್ಕಾಗಿ ಮಹರ್‌ ಅವರನ್ನು ಅರೆಸೇನಾ ಪಡೆಯ ಸಿಬ್ಬಂದಿ ಸೋಮವಾರ ಅಪಹರಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ
ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಪಾಕ್‌ ಸೇನಾ ಮುಖ್ಯಸ್ಥ ಕಮರ್‌ ಜಾವೇದ್‌ ಬಾಜ್ವಾ ಅವರು ತನಿಖೆಗೆ ಆದೇಶ ನೀಡಿದ್ದಾರೆ.

ವಿರೋಧ ಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್‌ನ (ಪಿಎಂಎಲ್‌–ಎನ್‌) ಸದಸ್ಯ ಮುಹಮ್ಮದ್‌ ಸಫ್ದರ್‌ ಅವರನ್ನು ಸೋಮ
ವಾರ ಬಂಧಿಸಲಾಗಿದೆ. ಸಿಂಧ್‌ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲಿ ನಡೆದ ಪ್ರತಿಭಟನೆಯ ಬಳಿಕ ಈ ಬಂಧನ ನಡೆದಿದೆ. ಪಾಕಿಸ್ತಾನದ ರಾಜಕಾರಣದಲ್ಲಿ ಸೇನೆಯು ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿರುವ ಪಿಎಂಎಲ್‌–ಎನ್‌, ಪ್ರಧಾನಿ ಇಮ್ರಾನ್‌ ಖಾನ್‌ ಸರ್ಕಾರದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದೆ. ಪಿಎಂಎಲ್‌–ಎನ್‌ ಆರೋಪವನ್ನು ಸೇನೆಯು ಅಲ್ಲಗಳೆದಿದೆ.

ADVERTISEMENT

ಪ್ರತಿಭಟನೆಯ ನಾಯಕತ್ವ ವಹಿಸಿರುವವರಲ್ಲಿ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಅಳಿಯ ಸಫ್ದರ್‌ ಕೂಡ ಸೇರಿದ್ದಾರೆ. ಸಫ್ದರ್‌ ಅವರ ಬಂಧನಕ್ಕೆ ತಾನು ಆದೇಶ ನೀಡಿಲ್ಲ. ಆದರೆ, ಒತ್ತಡದಿಂದಾಗಿ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಸಿಂಧ್‌ ಪ್ರಾಂತ್ಯದ ಸರ್ಕಾರ ಹೇಳಿದೆ.

‘ಪೊಲೀಸ್‌ ಮುಖ್ಯಸ್ಥರ ಫೋನ್‌ ವಶಕ್ಕೆ ಪಡೆಯಲಾಗಿದೆ. ಅವರನ್ನು ವಲಯ ಕಮಾಂಡರ್‌ ಕಚೇರಿಗೆ ಬಲವಂತವಾಗಿ ಕರೆದೊಯ್ದು ಬಂಧನ ಆದೇಶಕ್ಕೆ ಸಹಿ ಹಾಕಿಸಲಾಗಿದೆ’ ಎಂದು ಸಫ್ದರ್‌ ಅವರ ಹೆಂಡತಿ ಮರಿಯಂ ನವಾಜ್‌ ಹೇಳಿದ್ದಾರೆ. ಬಂಧನ ಆದೇಶಕ್ಕೆ ಸಹಿ ಹಾಕಿದ ಬಳಿಕ ಮಹರ್‌ ಅವರು ಹಿಂದಿರುಗಲು ಅವಕಾಶ ನೀಡಲಾಗಿದೆ.

ಬಿಲಾವಲ್‌ ಭುಟ್ಟೊ ನೇತೃತ್ವದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯು ಸಿಂಧ್‌ ಪ್ರಾಂತ್ಯದಲ್ಲಿ ಅಧಿಕಾರದಲ್ಲಿದೆ. ಪ್ರಕರಣದ ಬಳಿಕ, ಪ್ರಾಂತ್ಯದ ಹತ್ತಾರು ಪೊಲೀಸ್‌ ಅಧಿಕಾರಿಗಳು ಪ್ರತಿಭಟನೆಯ ಭಾಗವಾಗಿ ರಜೆಗೆ ಅರ್ಜಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.